ಮಕ್ಕಳಿಗಾಗಿ ಬೈಬಲ್ಮಾದರಿ

ದೇವರು ಪ್ರಪಂಚವನ್ನು ಅದರಲ್ಲಿರುವ ಸಮಸ್ತವನ್ನು ಉಂಟುಮಾಡಿದನು! ದೇವರು ಉಂಟುಮಾಡಿದ ಮೊದಲನೆಯ ಮನುಷ್ಯನಾದ ಆದಾಮನು ತನ್ನ ಹೆಂಡತಿಯಾದ ಹವ್ವಳೊಂದಿಗೆ ಏದೇನ್ ತೋಟದಲ್ಲಿ ವಾಸವಾಗಿದ್ದನು. ಅವರು ತುಂಬಾ ಸಂತೋಷವಾಗಿಯೂ ದೇವರಿಗೆ ವಿಧೇಯರಾಗಿಯೂ ಇದ್ದರು. ಆದರೆ ಒಂದು ದಿನ ...
“ಏನಮ್ಮಾ, ತೋಟದಲ್ಲಿರುವ ಯಾವ ಹಣ್ಣನ್ನು ಕೂಡ ನೀವು ತಿನ್ನಬಾರದೆಂದು ದೇವರು ನಿಮಗೆ ಅಪ್ಪಣೆ ಕೊಟ್ಟಿರುವನೋ” ಎಂದು ಸರ್ಪವು ಹವ್ವಳಿಗೆ ಕೇಳಿತು. ಅದಕ್ಕೆ ಹವ್ವಳು, “ನಾವು ಎಲ್ಲಾ ಮರಗಳ ಹಣ್ಣನ್ನು ತಿನ್ನ ಬಹುದು ಆದರೆ ತೋಟದ ಮಧ್ಯದಲ್ಲಿರುವ ಮರದ ಹಣ್ಣನ್ನು ನಾವು ತಿನ್ನಲು ಬಾರದು, ಮುಟ್ಟಲೂ ಬಾರದು, ಹಾಗೆ ಮಾಡಿದರೆ ನಾವು ಸತ್ತೇ ಹೋಗುತ್ತೇವೆ” ಎಂದು ಹೇಳಿದನು “ನೀವು ಹೇಗೂ ಸಾಯುವದಿಲ್ಲ” ಎಂದು ಸರ್ಪವು ಉತ್ತರಿಸಿತು.
“ಆ ಹಣ್ಣನ್ನು ನೀವು ತಿಂದರೆ, ನೀವು ದೇವರಂತೆ ಆಗುವಿರಿ” ಎಂದು ಸರ್ಪವು ಹೇಳಿತ್ತು. ಹವ್ವಳು ಆ ಮರದ ಹಣ್ಣನ್ನು ತಿನ್ನಲು ಆಶೆಪಟ್ಟಳು. ಆಕೆ ಸರ್ಪದ ಮಾತಿಗೆ ಕಿವಿಗೊಟ್ಟು ಆ ಹಣ್ಣನ್ನು ತೆಗೆದುಕೊಂಡು ತಿಂದಳು.
ಮತ್ತು ತನ್ನ ಗಂಡನಿಗೂ ತಿನ್ನಲು ಕೊಟ್ಟಳು. ಅವನು ಕೂಡ ಅದನ್ನು ತಿಂದನು. ಹೀಗೆ ಹವ್ವಳು ದೇವರಿಗೆ ಅವಿಧೇಯಳಾದಳು ಮತ್ತು ಆದಾಮನಿಗೂ ಅವಿಧೇಯನಾಗುವಂತೆ ಮಾಡಿದಳು. ಹವ್ವಳು ಆದಾಮನಿಗೆ ಹಣ್ಣು ಕೊಡುವಾಗ ಅವನು, “ಬೇಡ ಅದನ್ನು ತಿಂದು ನಾನು ದೇವರಿಗೆ ಅವಿಧೇಯನಾಗುವದಿಲ್ಲ” ಎಂದು ಹೇಳಲಿಲ್ಲ.
ಹೀಗೆ ಆದಾಮ ಹವ್ವರು ದೇವರಿಗೆ ಅವಿಧೇಯರಾಗಿ ಪಾಪ ಮಾಡಿದರು. ತಾವಿಬ್ಬರೂ ಬೆತ್ತಲೆಯಾಗಿದ್ದೇವೆ ಎಂಬದನ್ನು ಅವರು ಅರಿತುಕೊಂಡರು. ಅಂಜೂರ ಮರದ ಎಲೆಗಳನ್ನು ಜೋಡಿಸಿ ತಮ್ಮ ಶರೀರಗಳನ್ನು ಮುಚ್ಚಿಕೊಳ್ಳಲು ಪ್ರಯತ್ನಿಸಿದರು. ದೇವರು ತಮ್ಮನ್ನು ನೋಡದಂತೆ ಪೊದೆಗಳ ಹಿಂದೆ ಬಚ್ಚಿಟ್ಟುಕೊಂಡರು.
ಸಂಜೆಯ ಸಮಯದಲ್ಲಿ ತಂಪಾದ ಗಾಳಿಯು ಬೀಸುವಾಗ ದೇವರು ಏದೇನ್ ತೋಟದೊಳಗೆ ಬಂದನು. ಆದಾಮ-ಹವ್ವರು ಏನು ಮಾಡಿದರೆಂಬದು ಆತನು ತಿಳಿದಿದ್ದನು. ದೇವರು ಆದಾಮನಿಗೆ ಏನಾಯಿತೆಂದು ಕೇಳಲು ಅವನು ಹವ್ವಳ ಮೇಲೆ ತಪ್ಪು ಹೊರಿಸಿದನು. ಮತ್ತು ಹವ್ವ ಸರ್ಪದ ಮೇಲೆ ತಪ್ಪುಹೊರಿಸಿದಳು. ದೇವರು “ಎಲ್ಲಾ ಪ್ರಾಣಿಗಳಲ್ಲಿ ಸರ್ಪವು ಶಪಿಸಲ್ಪಟ್ಟಿದೆ ಮತ್ತು ಹವ್ವಳು ಬಹು ಕಷ್ಟ ಮತ್ತು ವೇದನೆಯಿಂದ ಮಕ್ಕಳಿಗೆ ಜನ್ಮ ನೀಡುವಳು” ಎಂದು ಹೇಳಿದನು. ಮತ್ತು ಆದಾಮನಿಗೆ, “ನೀನು ಪಾಪಮಾಡಿರುವದರಿಂದ ನಿನ್ನ ನಿಮಿತ್ತ ಭೂಮಿಗೆ ಶಾಪ ಬಂದಿದೆ. ಅದರಲ್ಲಿ ಮುಳ್ಳುಗಿಡಗಳು, ಕಳೆಗಳು ಬೆಳೆಯುವವು. ಬಹು ಕಷ್ಟ ಪಟ್ಟು ದುಡಿದು, ಬೆವರು ಸುರಿಸಿ ನಿನ್ನ ಆಹಾರವನ್ನು ಸಂಪಾದಿಸಿಕೊಳ್ಳಬೇಕು” ಎಂದು ದೇವರು ಹೇಳಿದನು.
ದೇವರು ಆದಾಮ ಮತ್ತು ಹವ್ವರನ್ನು ಏದೇನ್ ತೋಟದಿಂದ ಹೊರಗೆ ಕಳುಹಿಸಿದನು. ಅವರು ಪಾಪಮಾಡಿದ್ದರಿಂದ ಜೀವ ಕೊಡುವ ದೇವರಿಂದ ಅಗಲಿ ದೂರ ಹೋದರು.
ಅವರು ಮತ್ತೆ ಏದೇನ್ ತೋಟದೊಳಗೆ ಹೋಗದಂತೆ ತಡೆಯಲು ಧಗಧಗನೆ ಉರಿಯುತ್ತಾ ಸುತ್ತಲು ತಿರುಗುವ ಕತ್ತಿಯನ್ನು ಇರಿಸಿದನು. ಮತ್ತು ದೇವರು ಅವರಿಗೆ ಚರ್ಮದ ಅಂಗಿಗಳನ್ನು ಮಾಡಿ ತೊಡಿಸಿದನು. ದೇವರು ಚರ್ಮವನ್ನು ಎಲ್ಲಿಂದ ಪಡೆದುಕೊಂಡನು?
ಆದಾಮ-ಹವ್ವರ ಕುಟುಂಬವು ಬೆಳೆಯತೊಡಗಿತು. ಅವರಿಗೆ ಇಬ್ಬರು ಮಕ್ಕಳು ಹುಟ್ಟಿದರು. ಮೊದಲನೆಯ ಮಗನ ಹೆಸರು ಕಾಯಿನ, ಅವನು ತೋಟಗಾರನಾದನು. ಎರಡನೆಯ ಮಗನ ಹೆಸರು ಹೇಬೆಲ ಅವನು ಕುರಿಕಾಯುವವನಾದನು. ಒಂದು ದಿನ ಕಾಯಿನು ತನ್ನ ತೋಟದ ಬೆಳೆಯನ್ನು ದೇವರಿಗೆ ಯಜ್ಞವಾಗಿ ಅರ್ಪಿಸಿದನು. ಹೇಬೆಲನು ತನ್ನ ಕುರಿಗಳಲ್ಲಿ ಉತ್ತಮವಾದದ್ದನ್ನು ದೇವರಿಗೆ ಯಜ್ಞವಾಗಿ ಅರ್ಪಿಸಿದನು. ದೇವರು ಹೇಬಲನ ಕಾಣಿಕೆ ಅಥವಾ ಯಜ್ಞವನ್ನು ಮೆಚ್ಚಿದನು.
ದೇವರು ಕಾಯಿನನ ಕಾಣಿಕೆಯನ್ನು ಮೆಚ್ಚಲಿಲ್ಲ. ಅದಕ್ಕಾಗಿ ಅವನು ತುಂಬಾ ಕೋಪಗೊಂಡನು. ಆದರೆ ದೇವರು ಅವನ ಬಳಿಗೆ ಬಂದು, “ನೀನು ಒಳ್ಳೇದನ್ನು ಮಾಡಿದ್ದರೆ ನೀನು ಕೂಡ ಮೆಚ್ಚಿಕೆಗೆ ಪಾತ್ರನಾಗುತ್ತಿದ್ದಿಯಲ್ಲವೇ?” ಅಂದನು.
ಆದರೆ ಕಾಯಿನನ ಕೋಪ ಕಡಿಮೆಯಾಗಲಿಲ್ಲ. ಅವನು ತನ್ನ ತಮ್ಮನನ್ನು ಅಡವಿಗೆ ಕರೆದು ಕೊಂಡು ಹೋಗಿ ಅಲ್ಲಿ ಅವನನ್ನು ಕೊಂದುಹಾಕಿದನು.
ದೇವರಿಗೆ ಕಾಯಿನನೊಂದಿಗೆ ತಿರುಗಿ ಮಾತಾಡಿ, “ನಿನ್ನ ತಮ್ಮನಾದ ಹೇಬೆಲನು ಎಲ್ಲಿ?” ಎಂದು ಕೇಳಿದನು, ಅದಕ್ಕೆ ಕಾಯಿನನು, “ನನಗೆ ಗೊತ್ತಿಲ್ಲ; ನನ್ನ ತಮ್ಮನನ್ನು ಕಾಯುವವನು ನಾನೋ?” ಎಂದು ಉತ್ತರಕೊಟ್ಟನು. ಕಾಯಿನನು ದೇವರಿಗೆ ಸುಳ್ಳು ಹೇಳಿದನು. ದೇವರು ಅವನನ್ನು ಶಿಕ್ಷಿಸಿದನು. ಅವನು ತೋಟಗಾರಿಕೆಯ ಕೆಲಸವನ್ನು ಬಿಟ್ಟು ಅಲೆದಾಡುವವನಾಗುವಂತೆ ಮಾಡಿದನು.
ಕಾಯಿನನು ದೇವರ ಸನ್ನಿಧಿಯಿಂದ ಅಂದರೆ ಬಳಿಯಿಂದ ಹೊರಟುಹೋದನು. ಅವನು ಮದುವೆಯಾಗಿ ಮಕ್ಕಳನ್ನು ಪಡೆದನು. ಕಾಯಿನನು ಒಂದು ಪಟ್ಟಣವನ್ನು ಕಟ್ಟಿದನು. ಅವನ ಮಕ್ಕಳು, ಮೊಮ್ಮಕ್ಕಳು ಅಂತೂ ಅವನ ಸಂತಾನದವರು ಆ ಪಟ್ಟಣದಲ್ಲಿ ತುಂಬಿಕೊಂಡರು.
ಅದೇ ಸಮಯದಲ್ಲಿ ಆದಾಮ ಮತ್ತು ಹವ್ವರು ಕೂಡ ಅನೇಕ ಮಕ್ಕಳನ್ನು ಪಡೆÀದರು. ಅವರ ಕುಟುಂಬ ಕೂಡ ಬೆಳೆಯಿತು. ಆ ದಿನಗಳಲ್ಲಿ ಜನರು ಅನೇಕ ವರ್ಷಗಳವರೆಗೆ ಬದುಕುತ್ತಿದ್ದರು. ಈಗಿನಂತೆ ಬೇಗ ಸಾಯುತ್ತಿರಲಿಲ್ಲ.
ಹೇಬೆಲನು ಸತ್ತನಂತರ ಹವ್ವಳಿಗೆ ಇನ್ನೊಬ್ಬ ಮಗನು ಹುಟ್ಟಿದನು. ಆಕೆ, “ದೇವರು ನನಗೆ ಹೇಬೆಲನ ಬದಲಾಗಿ ಇನ್ನೊಬ್ಬ ಮಗನನ್ನು ಕೊಟ್ಟಿದ್ದಾನೆ” ಎಂದು ಹೇಳಿ ಅವನಿಗೆ ಸೇತನೆಂದು ಹೆಸರಿಟ್ಟಳು. ಸೇತನು ದೇವಭಕ್ತನಾಗಿದ್ದನು. ಅವನು 912 ವರ್ಷಗಳು ಬದುಕಿ ಅನೇಕ ಮಕ್ಕಳನ್ನು ಪಡೆದನು.
ಭೂಮಿಯ ಮೇಲೆ ಜನಸಂಖ್ಯೆಯು ಹೆಚ್ಚಾಗತೊಡಗಿತು. ಅವರು ದೇವರನ್ನು ಮರೆತು ಬಿಟ್ಟು ಆತನ ದೃಷ್ಟಿಯಲ್ಲಿ ಕೆಟ್ಟದಾಗಿರುವದನ್ನು ಮಾಡಿದರು. ಹುಟ್ಟುವ ಪ್ರತಿಯೊಂದು ಸಂತಾನವು ಹೆಚ್ಚೆಚ್ಚಾಗಿ ಪಾಪಮಾಡುತ್ತಾ ಬಹು ಕೆಟ್ಟದಾಗ ತೊಡಗಿತು. ಪಾಪವು ತುಂಬಾ ಹೆಚ್ಚಾದಾಗ ದೇವರು ಮನುಷ್ಯರನ್ನು ಭೂಮಿಯ ಮೇಲಿಂದ ಸಂಪೂರ್ಣವಾಗಿ ನಾಶಮಾಡಬೇಕೆಂದು ಯೋಚಿಸಿದನು ಮತ್ತು ..
. . ಪ್ರಾಣಿ ಪಕ್ಷಿಗಳನ್ನು ಕೂಡ ನಾಶಮಾಡಲು ಆಲೋಚಿಸಿದನು. ಮನುಷ್ಯನನ್ನು ಉಂಟು ಮಾಡಿದ್ದಕ್ಕಾಗಿ ದೇವರು ಪಶ್ಚತ್ತಾಪಟ್ಟನು. ಆದರೆ ಎಲ್ಲಾ ಮನುಷ್ಯರಲ್ಲಿ ಒಬ್ಬನು ದೇವರ ಮೆಚ್ಚಿಕೆಗೆ ಪಾತ್ರನಾಗಿದ್ದನು ..
ಆ ಮನುಷ್ಯನ ಹೆಸರು ನೋಹ ಎಂದಾಗಿತ್ತು. ಅವನು ಸೇತನ ಸಂತಾನಕ್ಕೆ ಸೇರಿದವನಾಗಿದ್ದನು. ಅವನು ದೇವರ ಮುಂದೆ ನೀತಿವಂತನು ಮತ್ತು ದೋಷವಿಲ್ಲದವನು ಆಗಿದ್ದನು. ಮತ್ತು ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಂಡನು. ಅವನು ತನ್ನ ಮೂರು ಗಂಡು ಮಕ್ಕಳಿಗೆ ದೇವರಿಗೆ ವಿಧೇಯರಾಗಿ ನಡೆಯುವದಕ್ಕೆ ಕಲಿಸಿದ್ದನು. ದೇವರು ನೋಹನನ್ನು ವಿಶೇಷವಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುವದಕ್ಕಿದ್ದನು!
ಮುಕ್ತಾಯ
ದೇವರ ವಾಕ್ಯ
ಈ ಯೋಜನೆಯ ಬಗ್ಗೆ

ಅದು ಹೇಗೆ ಪ್ರಾರಂಭವಾಯಿತು? ನಾವು ಎಲ್ಲಿಂದ ಬಂದಿದ್ದೇವೆ? ಜಗತ್ತಿನಲ್ಲಿ ಏಕೆ ತುಂಬಾ ದುಃಖವಿದೆ? ಯಾವುದೇ ಭರವಸೆ ಇದೆಯೇ? ಸಾವಿನ ನಂತರ ಜೀವನವಿದೆಯೇ? ಈ ನೈಜ ಇತಿಹಾಸವನ್ನು ನೀವು ಓದಿದ ಉತ್ತರಗಳನ್ನು ಹುಡುಕಿ.
More
ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು ಬೈಬಲ್ ಫಾರ್ ಚಿಲ್ಡ್ರನ್, Inc. ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: https://bibleforchildren.org/languages/kannada/stories.php