YouVersion Logo
Search Icon

ಮತ್ತಾಯ 2

2
ಜ್ಯೋತಿಶ್ಶಾಸ್ತ್ರಜ್ಞರಿತ್ತ ಭೇಟಿ#2:0 ಈ ಗ್ರಂಥದಲ್ಲಿ ಕೊಡಲಾಗಿರುವ ಶಿರೋನಾಮೆಗಳೆಲ್ಲವು ಬೈಬಲ್ಲಿನಿಂದ ಆಯ್ದುಕೊಂಡ ವಾಕ್ಯಗಳಲ್ಲ. ಓದುಗರ ಗಮನವನ್ನು ಸೆಳೆಯುವ ಉದ್ದೇಶದಿಂದ ಕೆಲವು ಗಾದೆಗಳನ್ನು ನಾಣ್ನುಡಿಗಳನ್ನು ಹಾಗೂ ಪ್ರಾಸಬದ್ಧ ವಾಕ್ಯಗಳನ್ನು ಶಿರೋನಾಮೆಗಳಾಗಿ ಬಳಸಲಾಗಿವೆ.
1ಯೇಸುಸ್ವಾಮಿ ಜನಿಸಿದ್ದು ಹೆರೋದರಸನ ಕಾಲದಲ್ಲಿ: ಜುದೇಯ ನಾಡಿನ ಬೆತ್ಲೆಹೇಂ ಎಂಬ ಊರಿನಲ್ಲಿ.ಕೆಲವು ಜ್ಯೋತಿಷಿಗಳು ಪೂರ್ವದಿಕ್ಕಿನಿಂದ ಹೊರಟು ಜೆರುಸಲೇಮಿಗೆ ಬಂದರು. 2“ಯೆಹೂದ್ಯರ ಅರಸ ಹುಟ್ಟಿದ್ದಾರಲ್ಲವೇ, ಅವರೆಲ್ಲಿ?” ಎಂದು ವಿಚಾರಿಸಿದರು; “ಅವರನ್ನು ಸೂಚಿಸುವ ನಕ್ಷತ್ರ ಪೂರ್ವದಲ್ಲಿ ಉದಯಿಸಿದ್ದನ್ನು ಕಂಡು ಅವರನ್ನು ಆರಾಧಿಸಲು ಇಲ್ಲಿಗೆ ಬಂದಿದ್ದೇವೆ,” ಎಂದರು. 3ಇದನ್ನು ಕೇಳಿದ್ದೇ ಹೆರೋದರಸನು ಬಹಳ ತಳಮಳಗೊಂಡನು; ಅಂತೆಯೇ ಜೆರುಸಲೇಮ್ ಆದ್ಯಂತವು ಗಲಿಬಿಲಿಗೊಂಡಿತು. 4ಯೆಹೂದ್ಯರ ಎಲ್ಲ ಮುಖ್ಯ ಯಾಜಕರನ್ನೂ ಧರ್ಮಶಾಸ್ತ್ರಿಗಳನ್ನೂ ಅವನು ಸಭೆಸೇರಿಸಿದನು. “ಕ್ರಿಸ್ತ ಹುಟ್ಟಬೇಕಾದುದು ಎಲ್ಲಿ?” ಎಂದು ಅವರನ್ನು ವಿಚಾರಿಸಿದನು. 5ಅದಕ್ಕೆ ಅವರು, “ಜುದೇಯದಲ್ಲಿರುವ ಬೆತ್ಲೆಹೇಮಿನಲ್ಲೇ ಹುಟ್ಟುವನು; ಏಕೆಂದರೆ :
6‘ಜುದೇಯ ನಾಡಿನ ಬೆತ್ಲೆಹೇಮೇ,
ಜುದೇಯದ ಪ್ರಮುಖ ಪಟ್ಟಣಗಳಲ್ಲಿ ನೀನು ಅಲ್ಪಳೇನೂ ಅಲ್ಲ.
ಕಾರಣ ನನ್ನ ಪ್ರಜೆ ಇಸ್ರಯೇಲನ್ನು ಪರಿಪಾಲಿಸುವವನು ನಿನ್ನಿಂದಲೇ ಉದಯಿಸಲಿರುವನು’.
ಎಂದು ಪ್ರವಾದಿ ಬರೆದಿದ್ದಾನೆ” ಎಂದು ಉತ್ತರವಿತ್ತರು.
7ಆಗ ಹೆರೋದನು ಆ ಜ್ಯೋತಿಷಿಗಳನ್ನು ಗೋಪ್ಯವಾಗಿ ಬರಮಾಡಿಕೊಂಡು ಅವರಿಗೆ ನಕ್ಷತ್ರ ಕಾಣಿಸಿಕೊಂಡ ಕಾಲವನ್ನು ಸ್ಪಷ್ಟವಾಗಿ ಕೇಳಿ ತಿಳಿದುಕೊಂಡನು. 8ಅನಂತರ ಅವರನ್ನು ಬೆತ್ಲೆಹೇಮಿಗೆ ಕಳುಹಿಸಿಕೊಡುತ್ತಾ, “ನೀವು ಹೋಗಿ ಆ ಮಗುವನ್ನು ಚೆನ್ನಾಗಿ ಹುಡುಕಿರಿ; ಕಂಡಕೂಡಲೇ ನನಗೆ ಬಂದು ತಿಳಿಸಿರಿ. ನಾನೂ ಹೋಗಿ ಆ ಮಗುವನ್ನು ಆರಾಧಿಸಬೇಕು,” ಎಂದು ಹೇಳಿದನು. 9ಜ್ಯೋತಿಷಿಗಳು ಅರಸನ ಮಾತಿಗೆ ತಲೆಬಾಗಿ ಹೊರಟರು. 10ಪೂರ್ವದಿಕ್ಕಿನಲ್ಲಿ ಮೊದಲೇ ಅವರಿಗೆ ಕಾಣಿಸಿಕೊಂಡಿದ್ದ ನಕ್ಷತ್ರ ಪುನಃ ಕಾಣಿಸಿಕೊಂಡಿತು. ಅವರು ಪರಮಾನಂದಭರಿತರಾದರು. ಆ ನಕ್ಷತ್ರ ಅವರ ಮುಂದೆ ಮುಂದೆ ಸಾಗುತ್ತಾ ಮಗು ಇದ್ದ ಸ್ಥಳದ ಮೇಲೆ ಬಂದು ನಿಂತುಬಿಟ್ಟಿತು. 11ಜ್ಯೋತಿಷಿಗಳು ಆ ಮನೆಯನ್ನು ಪ್ರವೇಶಿಸಿ ಮಗುವನ್ನು ತಾಯಿ ಮರಿಯಳ ಬಳಿ ಕಂಡು ಅದಕ್ಕೆ ಸಾಷ್ಟಾಂಗವೆರಗಿ ಆರಾಧಿಸಿದರು. ತಮ್ಮ ತಮ್ಮ ಬೊಕ್ಕಸಗಳನ್ನು ಬಿಚ್ಚಿ ಚಿನ್ನ, ಪರಿಮಳದ್ರವ್ಯ ಮತ್ತು ರಕ್ತಬೋಳ#2:11 ಅಥವಾ : ಮೀರಾ ಎಂಬ ರಸಗಂಧ. ಇವುಗಳನ್ನು ಮಗುವಿಗೆ ಪಾದಕಾಣಿಕೆಯಾಗಿ ಸಮರ್ಪಿಸಿದರು. 12ಹೆರೋದನ ಬಳಿಗೆ ಹಿಂದಿರುಗಬಾರದೆಂದು ಕನಸಿನಲ್ಲಿ ದೈವಾಜ್ಞೆಯಾದ್ದರಿಂದ, ಅವರು ಬೇರೆ ಮಾರ್ಗವಾಗಿ ತಮ್ಮ ದೇಶಕ್ಕೆ ಮರಳಿದರು.
ಈಜಿಪ್ಟಿಗೆ ಪಲಾಯನ
13ಜ್ಯೋತಿಷಿಗಳು ಹೊರಟುಹೋದ ಮೇಲೆ ದೇವದೂತನು ಜೋಸೆಫನಿಗೆ ಕನಸಿನಲ್ಲಿ ಕಾಣಿಸಿಕೊಂಡು, “ಏಳು, ಹೆರೋದನು ಮಗುವನ್ನು ಕೊಂದುಹಾಕಲು ಹವಣಿಸುತ್ತಿದ್ದಾನೆ. ಮಗುವನ್ನೂ ತಾಯಿಯನ್ನೂ ಕರೆದುಕೊಂಡು ಈಜಿಪ್ಟ್ ದೇಶಕ್ಕೆ ಓಡಿಹೋಗು. ನಾನು ಪುನಃ ಹೇಳುವ ತನಕ ಅಲ್ಲೇ ಇರು,” ಎಂದನು. 14ಅದರಂತೆ ಜೋಸೆಫನು ಕೂಡಲೇ ಎದ್ದು ಮಗುವನ್ನೂ ತಾಯಿಯನ್ನೂ ರಾತ್ರೋರಾತ್ರಿಯಲ್ಲೇ ಕರೆದುಕೊಂಡು ಈಜಿಪ್ಟಿಗೆ ತೆರಳಿದನು. 15ಹೆರೋದನು ಸಾಯುವ ತನಕ ಅಲ್ಲೇ ಇದ್ದನು. ಈ ಪ್ರಕಾರ,
“ಈಜಿಪ್ಟ್ ದೇಶದಿಂದ ನನ್ನ ಕುಮಾರನನ್ನು ಕರೆದೆನು”
ಎಂದು ಪ್ರವಾದಿಯ ಮುಖಾಂತರ ಸರ್ವೇಶ್ವರನು ಹೇಳಿದ್ದ ಪ್ರವಚನ ಈಡೇರಿತು.
ಕೂಸುಗಳ ಕಗ್ಗೊಲೆ
16ಜ್ಯೋತಿಷಿಗಳಿಂದ ತಾನು ವಂಚಿತನಾದೆ ಎಂದು ಅರಿತ ಹೆರೋದನು ರೋಷಾವೇಶಗೊಂಡನು. ಬೆತ್ಲೆಹೇಮಿಗೂ ಅದರ ಸುತ್ತಮುತ್ತಲಿಗೂ ಆಳುಗಳನ್ನು ಕಳುಹಿಸಿದನು. ತಾನು ಜ್ಯೋತಿಷಿಗಳಿಂದ ತಿಳಿದುಕೊಂಡಿದ್ದ ಕಾಲದ ಆಧಾರದ ಮೇಲೆ ಅಲ್ಲಿದ್ದ, ಎರಡು ವರ್ಷಗಳಿಗೆ ಮೀರದ, ಎಲ್ಲಾ ಗಂಡುಮಕ್ಕಳನ್ನು ಕೊಂದುಹಾಕಿಸಿದನು.
17“ಕೇಳಿಬರುತಿದೆ ರಮಾ ಊರಿನೊಳು ರೋದನ,
ಗೋಳಾಟ, ಅಘೋರ ಆಕ್ರಂದನ;
ಕಳೆದುಕೊಂಡ ಮಕ್ಕಳಿಗಾಗಿ
ಗೋಳಿಡುತಿಹಳು ರಾಖೇಲಳು
ಇನ್ನಿಲ್ಲದವುಗಳಿಗಾಗಿ ಉಪಶಮನ ಒಲ್ಲೆನೆನುತಿಹಳು,”
18ಪ್ರವಾದಿ ಯೆರೆಮೀಯನ ಈ ಪ್ರವಚನ ಅಂದು ಸತ್ಯವಾಯಿತು.
ನಜರೇತಿನಲ್ಲಿ ನಿವಾಸ
19ಹೆರೋದನು ಸತ್ತುಹೋದನು. ಆಗ ಈಜಿಪ್ಟಿನಲ್ಲಿ ಜೋಸೆಫನಿಗೆ ದೇವದೂತನು ಕನಸಿನಲ್ಲಿ ಕಾಣಿಸಿಕೊಂಡು, 20“ಏಳು, ಮಗುವನ್ನೂ ತಾಯಿಯನ್ನೂ ಕರೆದುಕೊಂಡು ಇಸ್ರಯೇಲ್ ದೇಶಕ್ಕೆ ಹಿಂದಿರುಗು; ಮಗುವನ್ನು ಕೊಲ್ಲಬೇಕೆಂದಿದ್ದವರು ಸತ್ತುಹೋದರು,” ಎಂದು ತಿಳಿಸಿದನು. 21ಜೋಸೆಫನು ಎದ್ದು ತಾಯಿಯನ್ನೂ ಮಗುವನ್ನೂ ಕರೆದುಕೊಂಡು ಇಸ್ರಯೇಲ್ ದೇಶಕ್ಕೆ ಬಂದನು. 22ಆದರೆ ಹೆರೋದನ ಮಗ ಅರ್ಖೆಲಾಯನು ತಂದೆಯ ಬದಲಿಗೆ ಜುದೇಯ ಪ್ರಾಂತ್ಯವನ್ನು ಆಳುತ್ತಿದ್ದಾನೆಂದು ಕೇಳಿ ಜೋಸೆಫನು ಅಲ್ಲಿಗೆ ಹೋಗಲು ಅಂಜಿದನು. ಕನಸಿನಲ್ಲಿ ತಾನು ಪಡೆದ ಆದೇಶದ ಪ್ರಕಾರ ಗಲಿಲೇಯ ಪ್ರಾಂತ್ಯಕ್ಕೆ ತೆರಳಿದನು. 23ಅಲ್ಲಿರುವ ನಜರೇತ್ ಊರನ್ನು ಸೇರಿ ವಾಸಮಾಡಿದನು. ಹೀಗೆ, “ಆತನನ್ನು ನಜರೇತಿನವನೆಂದು ಕರೆಯುವರು” ಎಂಬ ಪ್ರವಚನ ನೆರವೇರಿತು.

Highlight

Share

Copy

None

Want to have your highlights saved across all your devices? Sign up or sign in

YouVersion uses cookies to personalize your experience. By using our website, you accept our use of cookies as described in our Privacy Policy