ಆದಿಕಾಂಡ 24

24
ಇಸಾಕ - ರೆಬೆಕ್ಕ ಇವರ ವಿವಾಹ
1ಅಬ್ರಹಾಮನು ಆಗ ತುಂಬು ವಯಸ್ಸಿನ ಮುದುಕ. ಸರ್ವೇಶ್ವರ ಸ್ವಾಮಿ ಅವನ ಎಲ್ಲ ಕೆಲಸಕಾರ್ಯಗಳನ್ನು ಆಶೀರ್ವದಿಸಿದ್ದರು. 2ಒಮ್ಮೆ ಅವನು, ತನ್ನ ಆಸ್ತಿಯನ್ನು ನೋಡಿಕೊಳ್ಳುತ್ತಿದ್ದ ಹಿರಿಯ ಸೇವಕನಿಗೆ, 3“ನನ್ನ ಮಗ ಇಸಾಕನಿಗೆ ಹೆಣ್ಣನ್ನು ನಾನು ವಾಸಮಾಡುತ್ತಿರುವ ಕಾನಾನ್ಯರಿಂದ ತರಬಾರದು; 4ನನ್ನ ಸ್ವಂತ ನಾಡಿಗೂ ನನ್ನ ಬಂಧುಬಳಗದವರ ಬಳಿಗೂ ಹೋಗಿ ಅವರಿಂದಲೇ ಅವನಿಗೆ ಹೆಣ್ಣು ತರಬೇಕು. ಹಾಗೆ ಮಾಡುತ್ತೇನೆಂದು ನೀನು ನನ್ನ ತೊಡೆಯ ಕೆಳಗೆ ಕೈಯಿಟ್ಟು ಇಹಪರಲೋಕಗಳ ಸರ್ವೇಶ್ವರನಾದ ದೇವರ ಮೇಲೆ ಪ್ರಮಾಣ ಮಾಡಬೇಕು,” ಎಂದು ಹೇಳಿದನು.
5ಅದಕ್ಕೆ ಆ ಸೇವಕ, “ಒಂದು ವೇಳೆ ಆ ಕನ್ಯೆಗೆ ಈ ನಾಡಿಗೆ ನನ್ನೊಡನೆ ಬರಲು ಇಷ್ಟವಿಲ್ಲದೆ ಹೋದೀತು. ಆಗ, ನೀವು ಬಿಟ್ಟುಬಂದ ನಾಡಿಗೆ ನಿಮ್ಮ ಮಗನನ್ನು ಮರಳಿ ಕರೆದುಕೊಂಡು ಹೋಗಬಹುದೆ?” ಎಂದು ವಿಚಾರಿಸಿದ. 6ಅಬ್ರಹಾಮನು ಅವನಿಗೆ, “ಅದೆಂದಿಗೂ ಕೂಡದು; ಅಲ್ಲಿಗೆ ನನ್ನ ಮಗನನ್ನು ಕರೆದುಕೊಂಡು ಹೋಗಲೇ ಬಾರದು. 7ನನ್ನ ತಂದೆಯ ಮನೆಯಿಂದಲೂ ನಾನು ಹುಟ್ಟಿದ ನಾಡಿನಿಂದಲೂ ನನ್ನನ್ನು ಇಲ್ಲಿಗೆ ಕರೆತಂದು, ‘ನಿನ್ನ ಸಂತತಿಗೆ ಈ ನಾಡನ್ನು ಕೊಡುತ್ತೇನೆ,’ ಎಂದು ಪರಲೋಕ ದೇವರಾದ ಸರ್ವೇಶ್ವರ ಸ್ವಾಮಿ ಪ್ರಮಾಣಮಾಡಿ ಹೇಳಿದ್ದಾರೆ. ಅವರೇ ತಮ್ಮ ದೂತನನ್ನು ನಿನ್ನ ಮುಂದೆ ಕಳುಹಿಸಿ, ನೀನು ಅಲ್ಲಿಂದ ನನ್ನ ಮಗನಿಗೆ ಹೆಣ್ಣು ತರುವುದಕ್ಕೆ ಅನುಕೂಲ ಮಾಡಿಕೊಡುವರು. 8ಇಲ್ಲಿಗೆ ನಿನ್ನ ಸಂಗಡ ಬರಲು ಆ ಕನ್ಯೆಗೆ ಇಷ್ಟವಿಲ್ಲದೆಹೋದರೆ, ನಾನು ಮಾಡಿಸಿದ ಪ್ರಮಾಣದಿಂದ ನೀನು ಬಿಡುಗಡೆಯಾಗಿರುವೆ. ಹೇಗೂ ನನ್ನ ಮಗನನ್ನು ಮರಳಿ ಅಲ್ಲಿಗೆ ಕರೆದುಕೊಂಡು ಹೋಗಕೂಡದು,” ಎಂದು ಮತ್ತೊಮ್ಮೆ ಒತ್ತಿ ಹೇಳಿದನು. 9ಆಗ ಆ ಸೇವಕ ತನ್ನ ಒಡೆಯನಾದ ಅಬ್ರಹಾಮನ ತೊಡೆಯ ಕೆಳಗೆ ಕೈಯಿಟ್ಟು ಅವನು ಹೇಳಿದಂತೆಯೇ ಪ್ರಮಾಣ ಮಾಡಿದನು.#24:9 ಮಾಡಿದ ಪ್ರಮಾಣಕ್ಕೆ ಬದ್ಧರಾಗಬೇಕೆಂದು ಯೆಹೂದ್ಯರು ಹೀಗೆ ಮಾಡುತ್ತಿದ್ದರು.
10ತರುವಾಯ ಆ ಸೇವಕ ತನ್ನ ಒಡೆಯನ ಒಂಟೆಗಳಲ್ಲಿ ಹತ್ತನ್ನು ಸಿದ್ಧಮಾಡಿಕೊಂಡು, ಅವನ ಆಸ್ತಿಯಿಂದ ಶ್ರೇಷ್ಠವಾದ ಒಡವೆಗಳನ್ನು ತೆಗೆದುಕೊಂಡು ಹೊರಟನು. ಎರಡು ನದಿಗಳ ಮಧ್ಯೆ ಇರುವ ಉತ್ತರ ಮೆಸಪೊಟೇಮಿಯಾ#24:10 ಅಥವಾ: ಆರಾಮ್, ಪದ್ದನ್ ಆರಾಮ್. ನಾಡಿಗೆ ಬಂದನು. ಅಲ್ಲಿಂದ ನಾಹೋರನು ವಾಸಿಸಿದ್ದ ಊರನ್ನು ಮುಟ್ಟಿದನು. 11ಸಂಜೆ, ಹೆಣ್ಣುಮಕ್ಕಳು ನೀರು ಹೊರುವುದಕ್ಕೆ ಬರುವ ವೇಳೆಗೆ, ಅವನು ಊರ ಹೊರಗಡೆ ಬಾವಿಯ ಬಳಿ ಒಂಟೆಗಳನ್ನು ಮಲಗಿಸಿದನು. 12“ನನ್ನೊಡೆಯ ಅಬ್ರಹಾಮನ ದೇವರಾಗಿರುವ ಸರ್ವೇಶ್ವರಾ, ಈ ದಿನ ನಾನು ಬಂದ ಕಾರ್ಯವನ್ನು ಕೈಗೂಡಿಸಿ, ನನ್ನೊಡೆಯ ಅಬ್ರಹಾಮನಿಗೆ ಉಪಕಾರಮಾಡಬೇಕೆಂದು ಪ್ರಾರ್ಥಸುತ್ತೇನೆ. 13ಇಗೋ, ನೀರಿನ ಬುಗ್ಗೆಯ ಬಳಿಯಲ್ಲೇ ನಿಂತಿದ್ದೇನೆ; ಈ ಊರಿನ ಹೆಣ್ಣುಮಕ್ಕಳು ನೀರಿಗೆ ಬರುತ್ತಾರೆ. 14ನಾನು ಯಾವ ಹುಡುಗಿ಼ಗೆ ‘ದಯವಿಟ್ಟು ನಿನ್ನ ಕೊಡವನ್ನು ಇಳಿಸಿ ಕುಡಿಯುವುದಕ್ಕೆ ಕೊಡು’ ಎಂದು ಹೇಳುವಾಗ ‘ನೀನೂ ಕುಡಿ, ನಿನ್ನ ಒಂಟೆಗಳಿಗೂ ಕುಡಿಯ ಕೊಡುತ್ತೇನೆ’ ಎನ್ನುತ್ತಾಳೋ ಅವಳೇ ನಿಮ್ಮ ದಾಸ ಇಸಾಕನಿಗೆ ನೀವು ಚುನಾಯಿಸಿರುವ ಕನ್ಯೆಯಾಗಲಿ. ನನ್ನೊಡೆಯನ ಮೇಲೆ ನಿಮ್ಮ ದಯೆಯಿದೆ ಎಂದು ಇದರಿಂದ ಗೊತ್ತಾಗುವುದು,” ಎಂದುಕೊಂಡನು.
15ಆತನು ಹೀಗೆ ಹೇಳಿಕೊಳ್ಳುತ್ತಿರುವಾಗಲೇ ರೆಬೆಕ್ಕಳು ಹೆಗಲ ಮೇಲೆ ಕೊಡವನ್ನಿಟ್ಟುಕೊಂಡು ಊರ ಹೊರಗೆ ಬರುವುದನ್ನು ಕಂಡನು. ಆಕೆ, ಅಬ್ರಹಾಮನ ತಮ್ಮನಾದ ನಾಹೋರನಿಗೆ ಹೆಂಡತಿಯಾಗಿದ್ದ ಮಿಲ್ಕಳ ಮಗ ಬೆತೂವೇಲನ ಮಗಳು. 16ಬಲು ಚೆಲುವೆ; ಯಾವ ಪುರುಷನ ಸಂಸರ್ಗವೂ ಇಲ್ಲದ ಕನ್ನಿಕೆ, ಬುಗ್ಗೆಯ ಬಳಿಗೆ ಇಳಿದು ಕೊಡದಲ್ಲಿ ನೀರು ತುಂಬಿಸಿಕೊಂಡು ಮೇಲಕ್ಕೆ ಬಂದಳು. 17ಆ ಸೇವಕನು ಅವಳಿಗೆದುರಾಗಿ ಓಡಿಬಂದು, “ಅಮ್ಮಾ, ದಯಮಾಡಿ ಕೊಡದಿಂದ ಸ್ವಲ್ಪ ನೀರನ್ನು ಕುಡಿಯುವುದಕ್ಕೆ ಕೊಡು,” ಎಂದು ಕೇಳಿದನು. 18ಆಕೆ, “ಕುಡಿಯಪ್ಪಾ” ಎಂದು ಹೇಳಿ ಕೂಡಲೆ ಕೊಡವನ್ನು ಕೈಗಿಳಿಸಿ ಕುಡಿಯ ಕೊಟ್ಟಳು. 19ಅವನು ಕುಡಿದಾದ ಮೇಲೆ, “ನಿನ್ನ ಒಂಟೆಗಳಿಗೂ ಬೇಕಾದಷ್ಟು ನೀರು ತಂದುಕೊಡುತ್ತೇನೆ,” ಎಂದು ಹೇಳಿ, 20ಕೊಡದ ನೀರನ್ನು ತೊಟ್ಟಿಗೆ ಹೊಯ್ದು ಮತ್ತೆ ನೀರು ತರುವುದಕ್ಕೆ ಬಾವಿಗೆ ಓಡಿದಳು. ಹೀಗೆ ಅವನ ಎಲ್ಲ ಒಂಟೆಗಳಿಗೂ ತಂದುಕೊಟ್ಟಳು. 21ಆ ಮನುಷ್ಯ, ತನ್ನ ಪ್ರಯಾಣವನ್ನು ಸರ್ವೇಶ್ವರ ಸಫಲಗೊಳಿಸಿದರೋ ಇಲ್ಲವೋ ಎಂದು ಯೋಚಿಸುತ್ತಾ ಏನೂ ಮಾತಾಡದೆ ಆಕೆಯನ್ನೇ ದೃಷ್ಟಿಸಿ ನೋಡುತ್ತಿದ್ದನು.
22ಒಂಟೆಗಳು ಕುಡಿದಾದ ನಂತರ ಅವನು ಆಕೆಯ ಮೂಗಿಗೆ ಅರ್ಧ ತೊಲೆಯ ತೂಕವುಳ್ಳ ಒಂದು ಚಿನ್ನದ ಮೂಗುತಿಯನ್ನೂ ಕೈಗಳಿಗೆ ಹತ್ತು ತೊಲೆಯ ತೂಕವುಳ್ಳ ಎರಡು ಚಿನ್ನದ ಬಳೆಗಳನ್ನೂ ತೊಡಿಸಿದನು. 23"ನೀನು ಯಾರ ಮಗಳು? ದಯವಿಟ್ಟು ಹೇಳು; ನಿನ್ನ ತಂದೆಯ ಮನೆಯಲ್ಲಿ ತಂಗುವುದಕ್ಕೆ ಸ್ಥಳವಿದೆಯೇ?” ಎಂದು ಕೇಳಿದನು.
24ಅದಕ್ಕೆ ಆಕೆ, “ನಾನು ನಾಹೋರನಿಗೆ ಮಿಲ್ಕಳಲ್ಲಿ ಹುಟ್ಟಿದ ಬೆತೂವೇಲನ ಮಗಳು. 25ಹುಲ್ಲು, ಮೇವು ನಮ್ಮಲ್ಲಿ ಬಹಳ ಉಂಟು; ತಂಗುವುದಕ್ಕೆ ಸ್ಥಳವಿದೆ,” ಎಂದು ಉತ್ತರಕೊಟ್ಟಳು.
26ಇದನ್ನು ಕೇಳಿದ ಆ ಮನುಷ್ಯ ತಲೆಬಾಗಿ ಸರ್ವೇಶ್ವರನನ್ನು ಆರಾಧಿಸಿದನು. 27“ನನ್ನೊಡೆಯ ಅಬ್ರಹಾಮನ ದೇವರಾಗಿರುವ ಸರ್ವೇಶ್ವರ ಸ್ವಾಮಿಗೆ ಸ್ತೋತ್ರಸಲ್ಲಲಿ! ಅವರು ನನ್ನೊಡೆಯನ ಮೇಲಿಟ್ಟಿದ್ದ ಅಚಲ ಪ್ರೀತಿ ಪ್ರಾಮಾಣಿಕತೆಯನ್ನು ಕೈಬಿಟ್ಟಿಲ್ಲ. ನನ್ನೊಡೆಯನ ಬಂಧುಬಳಗದವರ ಮನೆಗೆ ನನ್ನನ್ನು ನೆಟ್ಟಗೆ ಕರೆತಂದಿದ್ದಾರೆ,” ಎಂದನು.
28ಆ ಹುಡುಗಿ ಓಡಿಹೋಗಿ ನಡೆದ ಸಂಗತಿಯನ್ನು ತಾಯಿಯ ಮನೆಯಲ್ಲಿದ್ದ ಎಲ್ಲರಿಗೂ ತಿಳಿಸಿದಳು. 29ರೆಬೆಕ್ಕಳಿಗೆ ಲಾಬಾನ್‍ ಎಂಬ ಅಣ್ಣ ಇದ್ದನು. 30ಅವನು ತನ್ನ ತಂಗಿಯ ಮೇಲಿದ್ದ ಮೂಗುತಿಯನ್ನೂ ಬಳೆಗಳನ್ನೂ ನೋಡಿದನು. ಆ ಮನುಷ್ಯ ಆಕೆಗೆ ಹೇಳಿದ ಮಾತುಗಳನ್ನು ಆಕೆಯಿಂದಲೇ ಕೇಳಿ ತಿಳಿದುಕೊಂಡನು. ಬಳಿಕ ಬುಗ್ಗೆಯ ಬಳಿ ಒಂಟೆಗಳೊಂದಿಗೆ ನಿಂತಿದ್ದ ಆ ಮನುಷ್ಯನ ಬಳಿಗೆ ಓಡಿಬಂದನು. 31“ಸರ್ವೇಶ್ವರ ಸ್ವಾಮಿಯಿಂದ ಆಶೀರ್ವಾದ ಪಡೆದವನೇ, ಮನೆಗೆ ಬಾ; ಇಲ್ಲಿ ಹೊರಗೇಕೆ ನಿಂತಿರುವೆ? ನಿನಗೆ ಮನೆ ಸಿದ್ಧವಾಗಿದೆ; ಒಂಟೆಗಳಿಗೆ ಬೇಕಾದ ಸ್ಥಳವಿದೆ,” ಎಂದು ಕರೆದನು.
32ಆ ಮನುಷ್ಯ ಮನೆಗೆ ಬಂದಾಗ ಲಾಬಾನನು ಒಂಟೆಗಳ ಹೊರೆಯನ್ನು ಇಳಿಸಿ, ಅವುಗಳಿಗೆ ಹುಲ್ಲು ಮೇವನ್ನು ಕೊಡಿಸಿದನು. ಆ ಮನುಷ್ಯನ ಮತ್ತು ಅವನ ಸಂಗಡಿಗರ ಕಾಲುಗಳನ್ನು ತೊಳೆಯುವುದಕ್ಕೆ ನೀರನ್ನು ತರಿಸಿದನು. 33ಅನಂತರ ಊಟ ಬಡಿಸಲಾಯಿತು. ಆದರೆ ಆ ಮನುಷ್ಯ, “ನಾನು ಬಂದ ಕೆಲಸವನ್ನು ಹೇಳದೆ ಊಟ ಮಾಡುವುದಿಲ್ಲ,” ಎಂದುಬಿಟ್ಟನು. ಆಗ ಲಾಬಾನನು, “ಅದೇನು ಹೇಳು,” ಎಂದನು.
34ಅವನು, “ನಾನು ಅಬ್ರಹಾಮನ ಸೇವಕ. 35ಸರ್ವೇಶ್ವರ ನನ್ನೊಡೆಯನನ್ನು ಯಥೇಚ್ಛವಾಗಿ ಆಶೀರ್ವದಿಸಿದ್ದಾರೆ; ದನಕುರಿಗಳನ್ನೂ ಬೆಳ್ಳಿಬಂಗಾರವನ್ನೂ ದಾಸದಾಸಿಯರನ್ನೂ ಒಂಟೆಗಳನ್ನೂ ಹೇಸರಗತ್ತೆಗಳನ್ನೂ ಕೊಟ್ಟಿದ್ದಾರೆ. ನನ್ನೊಡೆಯ ಐಶ್ವರ್ಯವಂತ. 36ಆತನ ಪತ್ನಿಯಾದ ಸಾರಳು, ವೃದ್ಧಾಪ್ಯದಲ್ಲಿ ಆತನಿಗೆ ಒಬ್ಬ ಮಗನನ್ನು ಹೆತ್ತಳು; ಆ ಮಗನಿಗೆ ನನ್ನೊಡೆಯ ತನಗಿರುವ ಸಮಸ್ತವನ್ನೂ ಕೊಟ್ಟಿದ್ದಾರೆ. 37ಅವರು ನನಗೆ, 'ನಾನು ವಾಸವಾಗಿರುವ ಕಾನಾನ್ ನಾಡಿನಿಂದ ನನ್ನ ಮಗನಿಗೆ ಹೆಣ್ಣನ್ನು ತರಬೇಡ; 38ನನ್ನ ತಂದೆಯ ಮನೆಗೂ ನನ್ನ ಬಂಧುಬಳಗದವರ ಬಳಿಗೂ ಹೋಗಿ ಅವರಿಂದಲೇ ಹೆಣ್ಣನ್ನು ತರಬೇಕು’ ಎಂದು ಹೇಳಿ ನನ್ನಿಂದ ಪ್ರಮಾಣ ಮಾಡಿಸಿಕೊಂಡಿದ್ದಾರೆ. 39ನಾನು ಅವರಿಗೆ, ‘ಒಂದು ವೇಳೆ ಇಲ್ಲಿಗೆ ನನ್ನೊಡನೆ ಬರಲು ಆ ಕನ್ಯೆಗೆ ಮನಸ್ಸಿಲ್ಲದೆ ಹೋದೀತು’ ಎಂದು ಹೇಳಿದೆ. 40ಅದಕ್ಕೆ ಅವರು, ‘ಯಾವ ಸರ್ವೇಶ್ವರ ಸ್ವಾಮಿಗೆ ನಾನು ವಿಧೇಯನಾಗಿ ನಡೆದುಕೊಂಡೆನೋ ಅವರು ತಮ್ಮ ದೂತನನ್ನು ನಿನ್ನೊಂದಿಗೆ ಕಳುಹಿಸುವರು. ನನ್ನ ತಂದೆಯ ಮನೆತನಕ್ಕೆ ಸೇರಿದ ಬಂಧುಬಳಗದವರಿಂದಲೇ ನನ್ನ ಮಗನಿಗೆ ಹೆಣ್ಣು ತರಲು ನಿನಗೆ ಅನುಕೂಲ ಮಾಡಿಕೊಡುವರು. 41ನಾನು ಮಾಡಿಸಿದ ಪ್ರಮಾಣದಿಂದ ನೀನು ಬಿಡುಗಡೆಯಾಗಬೇಕಾದರೆ - ನೀನು ನನ್ನ ಜನರ ಬಳಿಗೆ ಹೋಗಬೇಕು, ಅವರು ಹೆಣ್ಣನ್ನು ಕೊಡುವುದಿಲ್ಲ ಎನ್ನಬೇಕು. ಆಗ ಮಾತ್ರ ನಾನು ಮಾಡಿಸಿದ ಪ್ರಮಾಣದಿಂದ ಬಿಡುಗಡೆಯಾಗಿರುವೆ;’ ಎಂದು ಹೇಳಿದರು.
42“ನಾನು ಇಂದು ಈ ಊರಿನ ಬುಗ್ಗೆಯ ಬಳಿಗೆ ಬಂದೆ. ‘ನನ್ನೊಡೆಯ ಅಬ್ರಹಾಮನ ದೇವರಾಗಿರುವ ಸರ್ವೇಶ್ವರಾ, ಇಗೋ, ನೀರಿನ ಬುಗ್ಗೆಯ ಬಳಿಯಲ್ಲೇ ನಿಂತಿದ್ದೇನೆ. ನೀವು ನನ್ನ ಪ್ರಯಾಣವನ್ನು ಸಫಲ ಮಾಡಿದ್ದಾದರೆ 43ನೀರಿಗೆ ಬರುವ ಯಾವ ಹುಡುಗಿಗೆ ‘ದಯವಿಟ್ಟು ನಿನ್ನ ಕೊಡದಿಂದ ಸ್ವಲ್ಪ ನೀರನ್ನು ಕುಡಿಯುವುದಕ್ಕೆ ನನಗೆ ಕೊಡು’ ಎಂದು ನಾನು ಹೇಳುವಾಗ ಅವಳು, 44"ಕುಡಿಯಪ್ಪಾ, ಮತ್ತು ನಿನ್ನ ಒಂಟೆಗಳಿಗೂ ನೀರು ತಂದುಕೊಡುತ್ತೇನೆ’ ಎನ್ನುವಳೋ ಅವಳೇ ಸರ್ವೇಶ್ವರ ಸ್ವಾಮಿಯಿಂದ ನನ್ನೊಡೆಯನ ಮಗನಿಗೆ ಚುನಾಯಿತಳಾದ ಕನ್ನಿಕೆಯಾಗಿರಲಿ' ಎಂದೆ, 45ನಾನು ಹೀಗೆ ಮನಸ್ಸಿನಲ್ಲಿ ಹೇಳಿಕೊಳ್ಳುತ್ತಿರುವಾಗಲೇ ರೆಬೆಕ್ಕಳು ಹೆಗಲಿನ ಮೇಲೆ ಕೊಡವನ್ನು ಹೊತ್ತುಕೊಂಡು ಬರುವುದನ್ನು ಕಂಡೆ. ಆಕೆ ಬುಗ್ಗೆಗೆ ಇಳಿದು ನೀರನ್ನು ತೆಗೆದುಕೊಂಡು ಬಂದಾಗ ನಾನು ಆಕೆಗೆ, ‘ನನಗೆ ಕುಡಿಯುವುದಕ್ಕೆ ನೀರನ್ನು ಕೊಡಬೇಕಮ್ಮಾ’ ಎಂದು ಹೇಳಿದೆ. 46ಕೂಡಲೆ ಆಕೆ ಕೊಡವನ್ನು ಹೆಗಲಿನಿಂದ ಇಳಿಸಿ, ‘ಕುಡಿಯಪ್ಪಾ, ನಿನ್ನ ಒಂಟೆಗಳಿಗೂ ನೀರು ತಂದುಕೊಡುತ್ತೇನೆ,’ ಎಂದಳು. ನಾನು ಕುಡಿದ ಮೇಲೆ ಆಕೆ ಒಂಟೆಗಳಿಗೂ ನೀರನ್ನು ತಂದುಕೊಟ್ಟಳು. 47ನೀನು ಯಾರ ಮಗಳೆಂದು ಕೇಳಿದ್ದಕ್ಕೆ, 'ನಾಹೋರನಿಗೆ ಮಿಲ್ಕಳಲ್ಲಿ ಹುಟ್ಟಿದ ಬೆತೂವೇಲನ ಮಗಳು’ ಎಂದಳು. ಅದನ್ನು ಕೇಳಿ ನಾನು ಆಕೆಗೆ ಮೂಗುತಿಯನ್ನೂ ಕೈಗಳಿಗೆ ಬಳೆಗಳನ್ನೂ ತೊಡಿಸಿ, 48ನನ್ನೊಡೆಯ ಅಬ್ರಹಾಮನ ಸರ್ವೇಶ್ವರನಾದ ದೇವರಿಗೆ ತಲೆಬಾಗಿ ಆರಾಧಿಸಿದೆ. ಅವರು ನನ್ನೊಡೆಯ ಅಬ್ರಹಾಮನ ಮಗನಿಗೆ ಅವರ ತಮ್ಮನ ಮಗಳನ್ನೇ ಆರಿಸಿಕೊಳ್ಳುವಂತೆ ನನ್ನನ್ನು ನೆಟ್ಟಗೆ ಇಲ್ಲಿಗೆ ಕರೆದುಕೊಂಡು ಬಂದುದಕ್ಕಾಗಿ ಅವರನ್ನು ಕೊಂಡಾಡಿದೆ. 49ಹೀಗಿರುವಲ್ಲಿ ನೀವು ನನ್ನೊಡೆಯನಿಗೆ ಪ್ರತಿ ಪ್ರೀತಿಯನ್ನೂ ಪ್ರಾಮಾಣಿಕತೆಯನ್ನೂ ತೋರಲು ಒಪ್ಪಿದರೆ ನನಗೆ ಹೇಳಿ; ಇಲ್ಲವಾದರೆ ಇಲ್ಲವೆನ್ನಿ; ಆಗ ಯಾವ ಕಡೆ ತಿರುಗಬೇಕೆಂದು ನನಗೆ ಗೊತ್ತಾಗುತ್ತದೆ,” ಎಂದು ವಿವರಿಸಿದನು.
50ಅದಕ್ಕೆ ಲಾಬಾನನು ಮತ್ತು ಬೆತೂವೇಲನು, ” ಇದು ಸರ್ವೇಶ್ವರ ಸ್ವಾಮಿಯಿಂದಲೇ ಬಂದ ಸೂಚನೆ, ಇದಕ್ಕೆ ನಾವು ನಿನಗೆ 'ಹೌದು - ಇಲ್ಲ’ ಎಂದು ಹೇಳಲಾಗದು. 51ರೆಬೆಕ್ಕಳನ್ನು ಇಗೋ ನಿನ್ನ ವಶಕ್ಕೆ ಒಪ್ಪಿಸುತ್ತಿದ್ದೇವೆ; ಕರೆದುಕೊಂಡು ಹೋಗಬಹುದು. ಸರ್ವೇಶ್ವರ ಹೇಳಿದಂತೆಯೇ ಆಕೆ ನಿನ್ನೊಡೆಯನ ಮಗನಿಗೆ ಪತ್ನಿ ಆಗಲಿ,” ಎಂದರು. 52ಅಬ್ರಹಾಮನ ಸೇವಕನು ಅವರ ಮಾತನ್ನು ಕೇಳಿ ಸಾಷ್ಟಾಂಗವೆರಗಿ ಸರ್ವೇಶ್ವರ ಸ್ವಾಮಿಯನ್ನು ವಂದಿಸಿದನು. 53ಬಳಿಕ ತಾನು ತಂದಿದ್ದ ಬೆಳ್ಳಿಬಂಗಾರದ ಒಡವೆಗಳನ್ನು ಹಾಗು ವಸ್ತ್ರಗಳನ್ನು ತೆಗೆದು ರೆಬೆಕ್ಕಳಿಗೆ ಕೊಟ್ಟನು. ಆಕೆಯ ಅಣ್ಣನಿಗೂ ತಾಯಿಗೂ ಬೆಲೆಬಾಳುವ ಉಡುಗೊರೆಗಳನ್ನು ಕೊಟ್ಟನು. 54ಅವನು ಮತ್ತು ಅವನ ಸಂಗಡ ಬಂದಿದ್ದವರು ಊಟ ಉಪಚಾರಗಳನ್ನು ಮುಗಿಸಿಕೊಂಡು ರಾತ್ರಿಯನ್ನು ಅಲ್ಲೇ ಕಳೆದರು. ಬೆಳಿಗ್ಗೆ ಎದ್ದು, “ನನ್ನೊಡೆಯನ ಬಳಿಗೆ ಹೋಗಲು ಅಪ್ಪಣೆಯಾಗಬೇಕು,” ಎಂದ ಆ ಸೇವಕ. 55ಅದಕ್ಕೆ ರೆಬೆಕ್ಕಳ ಅಣ್ಣ ಹಾಗು ತಾಯಿ, “ಹುಡುಗಿ ಇನ್ನೂ ಎಂಟು ಹತ್ತು ದಿನವಾದರೂ ನಮ್ಮಲ್ಲಿರಲಿ; ಆಮೇಲೆ ಆಕೆ ಹೋಗಬಹುದು,” ಎಂದು ಹೇಳಿದರು.
56ಅವನು ಅವರಿಗೆ, “ಸರ್ವೇಶ್ವರ ನನ್ನ ಪ್ರಯಾಣವನ್ನು ಸಫಲಮಾಡಿದ್ದಾರೆ. ನನ್ನನ್ನು ತಡೆಯಬೇಡಿ; ನನ್ನ ಒಡೆಯನ ಬಳಿಗೆ ಹೋಗಲು ಅಪ್ಪಣೆಯಾಗಬೇಕು,” ಎಂದನು. 57ಅವರು, “ನಾವು ಹುಡುಗಿಯನ್ನು ಕರೆದು ಆಕೆಯ ಅಭಿಪ್ರಾಯವನ್ನು ತಿಳಿದುಕೊಳ್ಳುತ್ತೇವೆ,” ಎಂದು ಹೇಳಿ ರೆಬೆಕ್ಕಳನ್ನು ಕರೆದರು. 58“ಈ ಮನುಷ್ಯನ ಜೊತೆಯಲ್ಲಿ ಹೋಗುತ್ತೀಯಾ?” ಎಂದು ಕೇಳಿದರು. ಆಕೆ, “ಹೋಗುತ್ತೇನೆ,” ಎಂದಳು.
59ಆಗ ಅವರು ತಂಗಿ ರೆಬೆಕ್ಕಳನ್ನೂ ಆಕೆಯ ದಾದಿಯನ್ನೂ ಅಬ್ರಹಾಮನ ಸೇವಕನ ಮತ್ತು ಅವನ ಸಂಗಡಿಗರ ಜೊತೆಗೆ ಸಾಗಕಳುಹಿಸಿದರು, ಅಲ್ಲದೆ ರೆಬೆಕ್ಕಳನ್ನು ಹೀಗೆಂದು ಹರಸಿದರು:
60“ಸಾವಿರ, ಹತ್ತು ಸಾವಿರ, ಸಂತತಿಯಾಗಲಿ,
ಎಲೆ ತಂಗಿ ನಿನಗೆ;
ವೈರಿಗಳ ನಗರಗಳು ಸ್ವಾಧೀನವಾಗಲಿ ನಿನ್ನ ಸಂತತಿಗೆ!”
61ರೆಬೆಕ್ಕಳು ಮತ್ತು ಆಕೆಯ ದಾದಿಯರು ಒಂಟೆಗಳ ಮೇಲೆ ಅಬ್ರಹಾಮನ ಸೇವಕನನ್ನು ಹಿಂಬಾಲಿಸಿ ಹೋದರು. ಹೀಗೆ ಆ ಸೇವಕನು ರೆಬೆಕ್ಕಳನ್ನು ಕರೆದುಕೊಂಡು ಹೋದನು.
62ಇತ್ತ ಇಸಾಕನು ‘ಲಹೈರೋಯಿ’ ಎಂಬಲ್ಲಿಗೆ ಹೋಗಿ ಬಂದು ಕಾನಾನ್ ನಾಡಿನ ದಕ್ಷಿಣ ಪ್ರಾಂತದಲ್ಲಿ ವಾಸಮಾಡುತ್ತಿದ್ದನು. 63ಸಂಜೆ ವೇಳೆಯಲ್ಲಿ ಅವನು ವಿಶ್ರಾಂತಿಗಾಗಿ ತಿರುಗಾಡಲು ಹೋಗಿದ್ದನು. ಕಣ್ಣೆತ್ತಿ ನೋಡಿದಾಗ ಒಂಟೆಗಳು ಬರುತ್ತಿರುವುದು ಅವನಿಗೆ ಕಾಣಿಸಿತು. 64ರೆಬೆಕ್ಕಳೂ ಕಣ್ಣೆತ್ತಿ ಇಸಾಕನನ್ನು ನೋಡಿ ಒಂಟೆಯಿಂದ ಕೆಳಗಿಳಿದಳು. 65“ನಮ್ಮ ಕಡೆ ಹೊಲದಲ್ಲಿ ನಡೆದು ಬರುತ್ತಿರುವ ಆ ಮನುಷ್ಯ ಯಾರು?” ಎಂದು ಆ ಸೇವಕನನ್ನು ಕೇಳಿದಳು. “ಅವನೇ ನನ್ನೊಡೆಯ” ಎಂದು ಹೇಳಿದಾಗ ಆಕೆ ಮುಸಕುಹಾಕಿಕೊಂಡಳು.
66ಆ ಸೇವಕನು ತಾನು ಮಾಡಿದ ಕಾರ್ಯಗಳನ್ನೆಲ್ಲ ಇಸಾಕನಿಗೆ ವರದಿ ಮಾಡಿದನು. 67ಇಸಾಕನು ಆಕೆಯನ್ನು ತನ್ನ ತಾಯಿ ಸಾರಳ ಗುಡಾರಕ್ಕೆ ಕರೆದುಕೊಂಡು ಹೋದನು. ಹೀಗೆ ಅವನು ರೆಬೆಕ್ಕಳನ್ನು ವರಿಸಿದನು; ಆಕೆ ಅವನಿಗೆ ಪತ್ನಿಯಾದಳು. ಆಕೆಯ ಮೇಲಿನ ಪ್ರೀತಿ, ತನ್ನ ತಾಯಿ ಸಾರಳನ್ನು ಕಳೆದುಕೊಂಡಿದ್ದ ಅವನಿಗೆ ಸಾಂತ್ವನ ತಂದಿತು.

醒目顯示

分享

複製

None

想在你所有裝置上儲存你的醒目顯示?註冊帳戶或登入