ಆದಿ 3

3
ಪಾಪದ ಉತ್ಪತ್ತಿ
1ಯೆಹೋವನಾದ ದೇವರು ಉಂಟುಮಾಡಿದ ಎಲ್ಲಾ ಕಾಡುಮೃಗಗಳಲ್ಲಿ ಸರ್ಪವು ಅತಿ ಯುಕ್ತಿಯುಳ್ಳದ್ದಾಗಿತ್ತು. ಸರ್ಪವು ಸ್ತ್ರೀಯ ಬಳಿಗೆ ಬಂದು, “ಏನಮ್ಮಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನು ನೀವು ತಿನ್ನಬಾರದೆಂದು ದೇವರು ಅಪ್ಪಣೆ ಕೊಟ್ಟಿರುವುದು ನಿಜವೋ?” ಎಂದು ಕೇಳಲು.
2ಆ ಸ್ತ್ರೀಯು ಸರ್ಪಕ್ಕೆ, “ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣುಗಳನ್ನು ತಿನ್ನಬಹುದು, 3ಆದರೆ ತೋಟದ ಮಧ್ಯದಲ್ಲಿರುವ ಆ ಮರದ ಹಣ್ಣಿನ ವಿಷಯವಾಗಿ, ‘ನೀವು ಇದನ್ನು ತಿನ್ನಲೂ ಬಾರದು, ಮುಟ್ಟಲೂ ಕೂಡದು, ತಿಂದರೆ ಸಾಯುವಿರಿ’ ಎಂದು ದೇವರು ಹೇಳಿದ್ದಾನೆ” ಅಂದಳು.
4ಆಗ ಸರ್ಪವು ಸ್ತ್ರೀಗೆ, “ನೀವು ನಿಶ್ಚಯವಾಗಿ ಸಾಯುವುದಿಲ್ಲ. 5ನೀವು ಇದರ ಹಣ್ಣನ್ನು ತಿಂದ ಕ್ಷಣವೇ ನಿಮ್ಮ ಕಣ್ಣುಗಳು ತೆರೆಯುವವು, ನೀವು ದೇವರುಗಳಂತೆ ಆಗಿ ಒಳ್ಳೆಯದರ ಮತ್ತು ಕೆಟ್ಟದ್ದರ ಬೇಧವನ್ನು ತಿಳಿಯುವಿರಿ, ಇದು ದೇವರಿಗೆ ಚೆನ್ನಾಗಿ ಗೊತ್ತು” ಎಂದು ಹೇಳಿತು.
6ಆಗ ಸ್ತ್ರೀಯು ಆ ಮರದ ಹಣ್ಣು ತಿನ್ನುವುದಕ್ಕೆ ಉತ್ತಮವಾಗಿಯೂ, ನೋಡುವುದಕ್ಕೆ ರಮ್ಯವಾಗಿಯೂ, ಜ್ಞಾನೋದಯಕ್ಕೆ ಅಪೇಕ್ಷಿಸತಕ್ಕದ್ದಾಗಿಯೂ ಇದೆ ಎಂದು ತಿಳಿದು ಅದನ್ನು ತೆಗೆದುಕೊಂಡು ತಿಂದಳು ಮತ್ತು ಸಂಗಡ ಇದ್ದ ಗಂಡನಿಗೂ ಕೊಡಲೂ, ಅವನೂ ತಿಂದನು.
7ಕೂಡಲೆ ಅವರಿಬ್ಬರ ಕಣ್ಣುಗಳು ತೆರೆದವು. ತಾವು ಬೆತ್ತಲೆಯಾಗಿದ್ದೇವೆಂದು ತಿಳಿದು ಅಂಜೂರದ ಎಲೆಗಳನ್ನು ಜೋಡಿಸಿ ಉಟ್ಟುಕೊಂಡರು.
8ತರುವಾಯ ಯೆಹೋವನಾದ ದೇವರು ಸಂಜೆಯ ತಂಗಾಳಿಯಲ್ಲಿ ತೋಟದೊಳಗೆ ಸಂಚರಿಸುತ್ತಿರುವಾಗ ಆ ಮನುಷ್ಯನು ಮತ್ತು ಸ್ತ್ರೀಯು ಆತನ ಸಪ್ಪಳವನ್ನು ಕೇಳಿ ಆತನಿಗೆ ಕಾಣಿಸಬಾರದೆಂದು ತೋಟದ ಮರಗಳ ಹಿಂದೆ ಅಡಗಿಕೊಂಡರು. 9ಆಗ ಯೆಹೋವ ದೇವರು ಮನುಷ್ಯನನ್ನು ಕರೆದು, “ನೀನು ಎಲ್ಲಿದ್ದೀ?” ಎಂದು ಕೇಳಿದನು.
10ಅದಕ್ಕೆ ಅವನು, “ನೀನು ತೋಟದಲ್ಲಿ ಸಂಚರಿಸುವ ಸಪ್ಪಳವನ್ನು ನಾನು ಕೇಳಿ, ಬೆತ್ತಲೆಯಾಗಿರುವುದರಿಂದ ಹೆದರಿ ಅಡಗಿಕೊಂಡೆನು” ಎಂದನು.
11ಅದಕ್ಕಾತನು, “ನೀನು ಬೆತ್ತಲೆಯಾಗಿದ್ದೀಯೆಂದು ನಿನಗೆ ತಿಳಿಸಿದವರಾರು? ತಿನ್ನಬಾರದೆಂದು ನಾನು ನಿನಗೆ ಆಜ್ಞಾಪಿಸಿದ ಮರದ ಹಣ್ಣನ್ನು ತಿಂದಿದ್ದಿಯಾ?” ಎಂದು ಕೇಳಿದನು.
12ಅದಕ್ಕೆ ಆ ಮನುಷ್ಯನು, “ನನ್ನ ಜೊತೆಯಲ್ಲಿರುವುದಕ್ಕೆ ನೀನು ಕೊಟ್ಟ ಈ ಸ್ತ್ರೀಯು, ಆ ಮರದ ಹಣ್ಣನ್ನು ನನಗೆ ಕೊಟ್ಟಳು, ನಾನು ತಿಂದೆನು” ಎಂದು ಹೇಳಿದನು.
13ಯೆಹೋವನಾದ ದೇವರು ಆ ಸ್ತ್ರೀಗೆ, “ಇದೇನು ನೀನು ಮಾಡಿದ್ದು?” ಎಂದು ಕೇಳಲು, ಆ ಸ್ತ್ರೀಯು, “ಸರ್ಪವು ನನ್ನನ್ನು ವಂಚಿಸಿತು, ನಾನು ತಿಂದೆನು” ಎಂದು ಉತ್ತರ ಕೊಟ್ಟಳು.
ದೇವರ ದಂಡನೆ
14ಆಗ ಯೆಹೋವನಾದ ದೇವರು ಸರ್ಪಕ್ಕೆ;
“ನೀನು ಈ ಕಾರ್ಯವನ್ನು ಮಾಡಿದ್ದರಿಂದ ಎಲ್ಲಾ ಪಶುಗಳಲ್ಲಿಯೂ ಅಡವಿಯ ಎಲ್ಲಾ ಕಾಡುಮೃಗಗಳಲ್ಲಿಯೂ ಶಾಪಗ್ರಸ್ತನಾಗಿರುವೆ. ನೀನು ಹೊಟ್ಟೆಯಿಂದ ಹರಿದು ನಿನ್ನ ಜೀವಮಾನದ ದಿನಗಳಲ್ಲೆಲ್ಲಾ ಮಣ್ಣನ್ನೇ ತಿನ್ನುವಿ.
15ನಿನಗೂ, ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವುದು. ನೀನು ಅವನ ಹಿಮ್ಮಡಿಯನ್ನು ಕಚ್ಚುವಿ” ಎಂದು ಹೇಳಿದನು.
16ಆ ನಂತರ ಆ ಸ್ತ್ರೀಗೆ, “ನಾನು ನಿನ್ನ ಗರ್ಭವೇದನೆಯನ್ನು ಅಧಿಕವಾಗಿ ಹೆಚ್ಚಿಸುವೆನು ನೀನು ನೋವಿನಿಂದ ಮಕ್ಕಳನ್ನು ಹಡೆಯುವಿ. ಗಂಡನ ಮೇಲೆ ನಿನಗೆ ಬಯಕೆ ಇರುವುದು, ಆದರೆ ಅವನು ನಿನ್ನ ಮೇಲೆ ಆಳ್ವಿಕೆ ಮಾಡುವನು” ಎಂದು ಹೇಳಿದನು.
17ಅನಂತರ ಆ ಪುರುಷನಿಗೆ, “ತಿನ್ನಬಾರದೆಂದು ನಾನು ನಿನಗೆ ಆಜ್ಞಾಪಿಸಿದ ಮರದ ಫಲವನ್ನು ನಿನ್ನ ಹೆಂಡತಿಯ ಮಾತು ಕೇಳಿ ತಿಂದ ಕಾರಣ, ನಿನ್ನ ನಿಮಿತ್ತ ಭೂಮಿಯು ಶಾಪಗ್ರಸ್ಥವಾಯಿತು. ನಿನ್ನ ಜೀವಮಾನವೆಲ್ಲಾ ಕಷ್ಟಪಟ್ಟು ಬೆವರು ಸುರಿಸಿ ದುಡಿದು ಭೂಮಿಯ ಹುಟ್ಟುವಳಿಯನ್ನು ತಿನ್ನಬೇಕು.
18ಆ ಭೂಮಿಯಲ್ಲಿ ಮುಳ್ಳುಗಿಡಗಳೂ ಕಳೆಗಳೂ ಬಹಳವಾಗಿ ಬೆಳೆಯುವವು, ಹೊಲದ ಬೆಳೆಗಳು ನಿನಗೆ ಆಹಾರವಾಗಿರುವವು.
19ನೀನು ಪುನಃ ಮಣ್ಣಿಗೆ ಸೇರುವ ತನಕ ಬೆವರು ಸುರಿಸುತ್ತಾ ಬೇಕಾದ ಆಹಾರವನ್ನು ಸಂಪಾದಿಸಬೇಕು. ನೀನು ಮಣ್ಣಿನಿಂದ ತೆಗೆಯಲ್ಪಟ್ಟವನಾಗಿರುವುದರಿಂದ ನೀನು ಮಣ್ಣೇ; ಪುನಃ ಮಣ್ಣಿಗೆ ಸೇರತಕ್ಕವನಾಗಿದ್ದೀ” ಎಂದು ಹೇಳಿದನು.
20ಆ ಮನುಷ್ಯನು ತನ್ನ ಹೆಂಡತಿಗೆ #3:20 ಹವ್ವ ಅಂದರೆ ಜೀವಹವ್ವ ಎಂದು ಹೆಸರಿಟ್ಟನು. ಆದುದರಿಂದ ಬದುಕಿರುವವರೆಲ್ಲರಿಗೂ ಆಕೆಯೇ ಮೂಲತಾಯಿಯಾಗಿದ್ದಾಳೆ. 21ಯೆಹೋವ ದೇವರು ಆದಾಮನಿಗೂ ಅವನ ಹೆಂಡತಿಗೂ ಚರ್ಮದ ಅಂಗಿಗಳನ್ನು ಮಾಡಿ ತೊಡಿಸಿದನು.
ಆದಾಮ ಹವ್ವಳನ್ನು ತೋಟದಿಂದ ಹೊರಹಾಕಿದ್ದು
22ಯೆಹೋವ ದೇವರು “ಈ ಮನುಷ್ಯನು ಒಳ್ಳೆಯದರ ಮತ್ತು ಕೆಟ್ಟದ್ದರ ಬೇಧವನ್ನರಿತು ನಮ್ಮಲ್ಲಿ ಒಬ್ಬನಂತಾದನಲ್ಲಾ? ಇದರಿಂದ ಇವನು ಕೈಚಾಚಿ ಜೀವವೃಕ್ಷದ ಫಲವನ್ನು ಸಹ ತಿಂದು ಶಾಶ್ವತವಾಗಿ ಬದುಕುವವನಾಗಬಾರದು” ಎಂದು ಆಜ್ಞಾಪಿಸಿದನು. 23ಆದ್ದರಿಂದ ಯೆಹೋವನು ಅವನನ್ನು ಸೃಷ್ಟಿಸಿದ ಮಣ್ಣಿನ ಭೂಮಿಯನ್ನೇ ವ್ಯವಸಾಯ ಮಾಡುವುದಕ್ಕಾಗಿ ಅವನನ್ನು ಏದೆನ್ ತೋಟದಿಂದ ಹೊರಗೆ ಕಳುಹಿಸಿ ಬಿಟ್ಟನು. 24ಹೀಗೆ ಆತನು ಮನುಷ್ಯನನ್ನು ಹೊರಗೆ ಹಾಕಿ, ಜೀವವೃಕ್ಷಕ್ಕೆ ಹೋಗುವ ದಾರಿಯನ್ನು ಕಾಯುವುದಕ್ಕೆ, ಏದೆನ್ ವನದ ಪೂರ್ವ ದಿಕ್ಕಿನಲ್ಲಿ ಕೆರೂಬಿಯರನ್ನೂ, ಎಲ್ಲಾ ಕಡೆಯಲ್ಲಿ ಧಗಧಗಿಸುತ್ತಾ ಉರಿಯುವ ಜ್ವಾಲೆಯ ಕತ್ತಿಯನ್ನು ಇರಿಸಿದನು.

Valið núna:

ಆದಿ 3: IRVKan

Áherslumerki

Deildu

Afrita

None

Want to have your highlights saved across all your devices? Sign up or sign in

YouVersion notar vafrakökur til að sérsníða upplifun þína. Með því að nota vefsíðu okkar samþykkir þú notkun okkar á vafrakökum eins og lýst er í persónuverndarstefnu okkar