ಆದಿ 2

2
1ಹೀಗೆ ಭೂಮಿಯು ಆಕಾಶಗಳು ಅವುಗಳಲ್ಲಿರುವ ಸಮಸ್ತವೂ ನಿರ್ಮಿತವಾದವು. 2ದೇವರು ತನ್ನ ಸೃಷ್ಟಿಕಾರ್ಯವನ್ನು ಮುಗಿಸಿಬಿಟ್ಟು ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡನು. 3ದೇವರು ತನ್ನ ಸೃಷ್ಟಿ ಕಾರ್ಯವನ್ನು ಮುಗಿಸಿದ ನಂತರ ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡಿದ್ದರಿಂದ ಆ ದಿನವನ್ನು ಪರಿಶುದ್ಧ ದಿನವಾಗಿರಲಿ ಎಂದು ಆಶೀರ್ವದಿಸಿದನು. 4ಯೆಹೋವನಾದ ದೇವರು ಭೂಮಿಯು ಆಕಾಶಗಳನ್ನು ನಿರ್ಮಾಣ ಮಾಡಿದ ಚರಿತ್ರೆ ಇದೇ.
ಏದೆನ್ ಉದ್ಯಾನವನವೂ ಪಾಪೋತ್ಪತ್ತಿಯೂ
5ಯೆಹೋವನಾದ ದೇವರು ಭೂಮ್ಯಾಕಾಶಗಳನ್ನು ಉಂಟುಮಾಡಿದಾಗ ಯಾವ ವಿಧವಾದ ಗಿಡವೂ ಭೂಮಿಯಲ್ಲಿ ಇರಲಿಲ್ಲ. ಯಾವ ಸಸ್ಯವೂ ಮೊಳೆತಿರಲಿಲ್ಲ. ಏಕೆಂದರೆ ಯೆಹೋವನಾದ ದೇವರು ಭೂಮಿಯ ಮೇಲೆ ಮಳೆಯನ್ನು ಸುರಿಸಿರಲಿಲ್ಲ. ಭೂಮಿಯನ್ನು ವ್ಯವಸಾಯ ಮಾಡುವುದಕ್ಕೆ ಮನುಷ್ಯನೂ ಇರಲಿಲ್ಲ. 6ಆದರೂ ಭೂಮಿಯಿಂದ ನೀರಿನ #2:6 ಅಥವಾ ಮಂಜುಬುಗ್ಗೆ ಉಕ್ಕಿ ಮೇಲೆ ಬಂದು ನೆಲವನ್ನೆಲ್ಲಾ ತೋಯಿಸುತ್ತಿದವು.
7ಹೀಗಿರಲು ಯೆಹೋವನಾದ ದೇವರು ನೆಲದ ಮಣ್ಣಿನಿಂದ ಮನುಷ್ಯನನ್ನು ಸೃಷ್ಟಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದನು. ಆಗ ಮನುಷ್ಯನು ಬದುಕುವ ಪ್ರಾಣಿಯಾದನು. 8ಇದಲ್ಲದೆ ಯೆಹೋವನಾದ ದೇವರು ಮೂಡಣ ದಿಕ್ಕಿನಲ್ಲಿರುವ ಏದೆನ್ ಸೀಮೆಯಲ್ಲಿ ಒಂದು ಉದ್ಯಾನವನವನ್ನು ಸೃಷ್ಟಿಸಿ ತಾನು ಉಂಟುಮಾಡಿದ ಮನುಷ್ಯನನ್ನು ಅದರಲ್ಲಿ ತಂಗುವಂತೆ ಮಾಡಿದನು.
9ಆನಂತರ ಯೆಹೋವನಾದ ದೇವರು ನೋಡುವುದಕ್ಕೆ ರಮ್ಯವಾಗಿಯೂ, ತಿನ್ನುವುದಕ್ಕೆ ಉತ್ತಮವಾಗಿಯೂ ಇರುವ ಎಲ್ಲಾ ತರಹದ ಮರಗಳನ್ನು ಆ ಭೂಮಿಯಲ್ಲಿ ಬೆಳೆಯುವಂತೆ ಮಾಡಿದನು. ಅದಲ್ಲದೆ ಆ ವನದ ಮಧ್ಯದಲ್ಲಿ ಜೀವದಾಯಕ ವೃಕ್ಷವನ್ನೂ ಒಳ್ಳೇದರ ಕೆಟ್ಟದ್ದರ ಅರಿವನ್ನು ಹುಟ್ಟಿಸುವ ವೃಕ್ಷವನ್ನು ಬೆಳೆಯಿಸಿದನು.
10ಏದೆನ್ ಸೀಮೆಯಲ್ಲಿ ಒಂದು ನದಿ ಹುಟ್ಟಿ ಆ ವನವನ್ನು ತೋಯಿಸುತ್ತಿತು. ಅದು ಅಲ್ಲಿಂದ ನಾಲ್ಕು ಉಪನದಿಗಳಾಗಿ ಕವಲೊಡೆದಿತ್ತು. 11ಮೊದಲನೆಯದರ ಹೆಸರು ಪೀಶೋನ್, ಅದು ಬಂಗಾರ ದೊರೆಯುವ ಹವೀಲ ದೇಶವನ್ನೆಲ್ಲಾ ಸುತ್ತಿ ಹರಿಯುತ್ತದೆ. 12ಆ ಪ್ರದೇಶದ ಬಂಗಾರವು ಅಮೂಲ್ಯವಾದದ್ದು. ಅಲ್ಲಿ ಬದೋಲಖ ಧೂಪವೂ, ಗೋಮೇಧಿಕದ ಅಮೂಲ್ಯ ರತ್ನವು ಸಿಕ್ಕುತ್ತದೆ. 13ಎರಡನೆಯ ನದಿಯ ಹೆಸರು ಗೀಹೋನ್, ಅದು #2:13 ಐಥಿಯೋಪ್ಯಕೂಷ್ ದೇಶವನ್ನೆಲ್ಲಾ ಸುತ್ತಿ ಹರಿಯುತ್ತದೆ. 14ಮೂರನೆಯ ನದಿಯ ಹೆಸರು ಟೈಗ್ರೀಸ್; ಅದು ಅಶ್ಶೂರ್ ದೇಶದ ಪೂರ್ವಕ್ಕೆ ಹರಿಯುವುದು. ನಾಲ್ಕನೆಯದು ಯೂಫ್ರೆಟಿಸ್ ನದಿ.
15ಯೆಹೋವನಾದ ದೇವರು ಆ ಮನುಷ್ಯನನ್ನು ಕರೆದುಕೊಂಡು ಹೋಗಿ ಏದೆನ್ ತೋಟವನ್ನು ವ್ಯವಸಾಯ ಮಾಡುವುದಕ್ಕೂ ಕಾಯುವುದಕ್ಕೂ ಅದರಲ್ಲಿ ಇರಿಸಿದನು. 16ಇದಲ್ಲದೆ ಯೆಹೋವನಾದ ದೇವರು ಆ ಮನುಷ್ಯನಿಗೆ, “ನೀನು ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನಬಹುದು. 17ಒಳ್ಳೇದರ ಕೆಟ್ಟದ್ದರ ಅರಿವನ್ನು ಹುಟ್ಟಿಸುವ ಈ ಮರದ ಹಣ್ಣನ್ನು ಮಾತ್ರ ತಿನ್ನಬಾರದು. ತಿಂದ ದಿನವೇ ಸತ್ತು ಹೋಗುವೆ” ಎಂದು ಆಜ್ಞಾಪಿಸಿದನು.
18ಅನಂತರ ಯೆಹೋವನಾದ ದೇವರು, “ಮನುಷ್ಯನು ಒಂಟಿಯಾಗಿರುವುದು ಒಳ್ಳೆಯದಲ್ಲ. ಅವನಿಗೆ ಸರಿಯಾದ ಸಹಕಾರಿಯನ್ನು ಉಂಟುಮಾಡುವೆನು” ಅಂದನು.
19ಯೆಹೋವನು ಎಲ್ಲಾ ಭೂಜಂತುಗಳನ್ನೂ ಆಕಾಶದ ಪಕ್ಷಿಗಳನ್ನೂ, ನೆಲದ ಮಣ್ಣಿನಿಂದ ಸೃಷ್ಟಿಸಿ ಇವುಗಳಿಗೆ ಮನುಷ್ಯನು ಏನೇನು ಹೆಸರಿಡುವನೋ ನೋಡೋಣ ಎಂದು ಅವನ ಬಳಿಗೆ ಬರಮಾಡಿದನು. ಮನುಷ್ಯನು ಒಂದೊಂದು ಪ್ರಾಣಿಗೆ ಯಾವ ಯಾವ ಹೆಸರಿಟ್ಟನೋ ಅದೇ ಅವುಗಳ ಹೆಸರಾಯಿತು. 20ಹೀಗೆ #2:20 ಮನುಷ್ಯನುಆದಾಮನು ಎಲ್ಲಾ ಪಶುಗಳಿಗೂ, ಆಕಾಶದ ಪಕ್ಷಿಗಳಿಗೂ, ಕಾಡುಮೃಗಗಳಿಗೂ ಹೆಸರಿಟ್ಟನು. ಆದರೆ ಆ ಮನುಷ್ಯನಿಗೆ ಸರಿಯಾದ ಸಹಕಾರಿ ಸಿಗಲಿಲ್ಲ.
21ಹೀಗಿರುವಲ್ಲಿ ಯೆಹೋವನಾದ ದೇವರು ಆ ಮನುಷ್ಯನಿಗೆ ಗಾಢನಿದ್ರೆಯನ್ನು ಬರಮಾಡಿ ಅವನ ಪಕ್ಕೆಯ ಎಲುಬುಗಳಲ್ಲಿ ಒಂದನ್ನು ತೆಗೆದುಕೊಂಡು ಅದರ ಸ್ಥಳವನ್ನು ಮಾಂಸದಿಂದ ತುಂಬಿದನು. 22ಯೆಹೋವನು ಮನುಷ್ಯನಿಂದ ತೆಗೆದ ಎಲುಬನ್ನು, ಸ್ತ್ರೀಯನ್ನಾಗಿ ಮಾಡಿ ಆಕೆಯನ್ನು ಅವನ ಬಳಿಗೆ ಕರೆದುಕೊಂಡು ಬಂದನು. ಅವನು ಆಕೆಯನ್ನು ನೋಡಿ,
23“ಈಗ ಸರಿ, ಈಕೆಯು ನನ್ನ ಎಲುಬುಗಳಿಂದ ಬಂದ ಎಲುಬು,
ನನ್ನ ಮಾಂಸದಿಂದ ಬಂದ ಮಾಂಸವೂ ಆಗಿದ್ದಾಳೆ.
ಈಕೆಯು ಮನುಷ್ಯನಿಂದ ಉತ್ಪತ್ತಿಯಾದ ಕಾರಣ ನಾರೀ ಎನ್ನಿಸಿಕೊಳ್ಳುವಳು” ಅಂದನು.
24ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರು ಒಂದೇ ಶರೀರವಾಗಿರುವರು.
25ಆ ಮನುಷ್ಯನು ಮತ್ತು ಅವನ ಹೆಂಡತಿ ಬೆತ್ತಲೆಯಾಗಿದ್ದರೂ ನಾಚಿಕೊಳ್ಳಲಿಲ್ಲ.

Valið núna:

ಆದಿ 2: IRVKan

Áherslumerki

Deildu

Afrita

None

Want to have your highlights saved across all your devices? Sign up or sign in

YouVersion notar vafrakökur til að sérsníða upplifun þína. Með því að nota vefsíðu okkar samþykkir þú notkun okkar á vafrakökum eins og lýst er í persónuverndarstefnu okkar