ಆದಿಕಾಂಡ 2

2
1ಹೀಗೆ ಭೂಮ್ಯಾಕಾಶಗಳೂ ಅವುಗಳಲ್ಲಿರುವ ಸಮಸ್ತವೂ ನಿರ್ಮಿತವಾದವು. 2ದೇವರು ತನ್ನ ಸೃಷ್ಟಿಕಾರ್ಯವನ್ನು ಮುಗಿಸಿಬಿಟ್ಟು ಏಳನೆಯ ದಿನದಲ್ಲಿ ವಿಶ್ರವಿುಸಿಕೊಂಡನು. 3ದೇವರು ತನ್ನ ಸೃಷ್ಟಿಕಾರ್ಯವನ್ನು ಮುಗಿಸಿ ಆ ಏಳನೆಯ ದಿನದಲ್ಲಿ ವಿಶ್ರವಿುಸಿಕೊಂಡದ್ದರಿಂದ ಆ ದಿನವನ್ನು ಪರಿಶುದ್ಧ ದಿನವಾಗಿರಲಿ ಎಂದು ಆಶೀರ್ವದಿಸಿದನು.
4ಇದೇ ಭೂಮ್ಯಾಕಾಶಗಳ ನಿರ್ಮಾಣ ಚರಿತ್ರೆ.
ಏದೆನ್ ವನವೂ ಪಾಪೋತ್ಪತ್ತಿಯೂ
5ಯೆಹೋವದೇವರು ಭೂಮ್ಯಾಕಾಶಗಳನ್ನು ಉಂಟುಮಾಡಿದಾಗ ಯಾವ ಗಿಡವಾದರೂ ಭೂವಿುಯಲ್ಲಿ ಇರಲಿಲ್ಲ, ಯಾವ ಪಲ್ಯವೂ ಹುಟ್ಟಿರಲಿಲ್ಲ. ಯಾಕಂದರೆ ಯೆಹೋವದೇವರು ಭೂವಿುಯ ಮೇಲೆ ಮಳೆಯನ್ನು ಸುರಿಸಿರಲಿಲ್ಲ; ಭೂವಿುಯನ್ನು ವ್ಯವಸಾಯ ಮಾಡುವದಕ್ಕೆ ಮನುಷ್ಯನೂ ಇರಲಿಲ್ಲ. 6ಆದರೂ ಭೂವಿುಯಿಂದ ಮಂಜು ಹಬ್ಬಿ ನೆಲವನ್ನೆಲ್ಲಾ ತೋಯಿಸುತ್ತಿತ್ತು.
7ಹೀಗಿರಲು ಯೆಹೋವದೇವರು ನೆಲದ#2.7 ಆದಿ. 3.19,23; ಕೀರ್ತ. 103.14, ನೆಲ ಎಂಬದಕ್ಕೆ ಮೂಲಭಾಷೆಯಲ್ಲಿ ಅದಾಮಾ. ಮನುಷ್ಯ ಎಂಬದಕ್ಕೆ ಆದಾಮ್. ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದನು; ಆಗ ಮನುಷ್ಯನು ಬದುಕುವ ಪ್ರಾಣಿಯಾದನು. 8ಇದಲ್ಲದೆ ಯೆಹೋವದೇವರು ಮೂಡಣ ದಿಕ್ಕಿನಲ್ಲಿರುವ ಏದೆನ್ ಸೀಮೆಯಲ್ಲಿ ಒಂದು ಉದ್ಯಾನವನವನ್ನು ಮಾಡಿ ತಾನು ರೂಪಿಸಿದ ಮನುಷ್ಯನನ್ನು ಅದರಲ್ಲಿ ಇರಿಸಿದನು. 9ಮತ್ತು ಯೆಹೋವದೇವರು ನೋಟಕ್ಕೆ ರಮ್ಯವಾಗಿಯೂ ಊಟಕ್ಕೆ ಅನುಕೂಲವಾಗಿಯೂ ಇರುವ ಎಲ್ಲಾ ತರದ ಮರಗಳನ್ನು ಆ ಭೂವಿುಯಲ್ಲಿ ಬೆಳೆಯ ಮಾಡಿದನು. ಅದಲ್ಲದೆ ಆ ವನಮಧ್ಯದಲ್ಲಿ ಜೀವದಾಯಕ ವೃಕ್ಷವನ್ನೂ ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ವೃಕ್ಷವನ್ನೂ ಬೆಳೆಯಿಸಿದನು.
10ಏದೆನ್ ಸೀಮೆಯಲ್ಲಿ ಒಂದು ನದಿ ಹುಟ್ಟಿ ಆ ವನವನ್ನು ತೋಯಿಸುತ್ತಿತ್ತು. ಅದು ಆಚೇ ಕಡೆಯಲ್ಲಿ ಒಡೆದು ನಾಲ್ಕು ಶಾಖೆಗಳಾಯಿತು. 11ಮೊದಲನೆಯದರ ಹೆಸರು ಪೀಶೋನ್; ಅದು ಬಂಗಾರ ದೊರಕುವ ಹವೀಲ ದೇಶವನ್ನೆಲ್ಲಾ ಸುತ್ತುವದು. 12ಆ ದೇಶದ ಬಂಗಾರವು ಶ್ರೇಷ್ಠವಾದದ್ದು; ಅಲ್ಲಿ ಬದೋಲಖ ಧೂಪವೂ ಗೋಮೇಧಿಕ ರತ್ನವೂ ಸಿಕ್ಕುತ್ತವೆ. 13ಎರಡನೆಯ ನದಿಯ ಹೆಸರು ಗೀಹೋನ್; ಅದು ಕೂಷ್ ದೇಶವನ್ನೆಲ್ಲಾ ಸುತ್ತುವದು. 14ಮೂರನೆಯ ನದಿಯ ಹೆಸರು ಹಿದ್ದೆಕೆಲ್;#2.14 ಹಿದ್ದೆಕೆಲ್ ಎಂಬದು ಟೈಗ್ರಿಸ್ ನದಿ. ದಾನಿ. 10.4. ಅದು ಅಶ್ಶೂರ್ ದೇಶದ ಮುಂದೆ ಹರಿಯುವದು. ನಾಲ್ಕನೆಯದು ಯೂಫ್ರೇಟೀಸ್ ನದಿ.
15ಯೆಹೋವದೇವರು ಆ ಮನುಷ್ಯನನ್ನು ಕರಕೊಂಡು ಹೋಗಿ ಏದೆನ್ ತೋಟವನ್ನು ವ್ಯವಸಾಯ ಮಾಡುವದಕ್ಕೂ ಕಾಯುವದಕ್ಕೂ ಅದರಲ್ಲಿ ಇಟ್ಟನು. 16ಇದಲ್ಲದೆ ಯೆಹೋವದೇವರು ಆ ಮನುಷ್ಯನಿಗೆ - ನೀನು ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣುಗಳನ್ನು ಯಥೇಚ್ಫವಾಗಿ ತಿನ್ನಬಹುದು; 17ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು; ತಿಂದ ದಿನ ಸತ್ತೇಹೋಗುವಿ ಎಂದು ವಿಧಿಸಿದನು.
18ಮತ್ತು ಯೆಹೋವದೇವರು - ಮನುಷ್ಯನು ಒಂಟಿಗನಾಗಿರುವದು ಒಳ್ಳೇದಲ್ಲ; ಅವನಿಗೆ ಸರಿಬೀಳುವ ಸಹಕಾರಿಯನ್ನು ಉಂಟುಮಾಡುವೆನು ಅಂದನು. 19ಆಗ ಆತನು ಎಲ್ಲಾ ಭೂಜಂತುಗಳನ್ನೂ ಆಕಾಶದ ಪಕ್ಷಿಗಳನ್ನೂ ಮಣ್ಣಿನಿಂದ ನಿರ್ಮಿಸಿ - ಇವುಗಳಿಗೆ ಆ ಮನುಷ್ಯನು ಏನೇನು ಹೆಸರಿಡುವನು ನೋಡೋಣ ಎಂದು ಅವನ ಬಳಿಗೆ ಬರಮಾಡಿದನು. ಮನುಷ್ಯನು ಒಂದೊಂದು ಪ್ರಾಣಿಗೆ ಯಾವ ಯಾವ ಹೆಸರಿಟ್ಟನೋ ಅದೇ ಹೆಸರಾಯಿತು. 20ಹೀಗೆ ಆ ಮನುಷ್ಯನು ಎಲ್ಲಾ ಪಶುಗಳಿಗೂ ಆಕಾಶದ ಪಕ್ಷಿಗಳಿಗೂ ಕಾಡು ಮೃಗಗಳಿಗೂ ಹೆಸರಿಟ್ಟನು. ಆದರೆ ಆ ಮನುಷ್ಯನಿಗೆ ಸರಿಬೀಳುವ ಸಹಕಾರಿ ಕಾಣಿಸಲಿಲ್ಲ. 21ಹೀಗಿರುವಲ್ಲಿ ಯೆಹೋವದೇವರು ಆ ಮನುಷ್ಯನಿಗೆ ಗಾಢನಿದ್ರೆಯನ್ನು ಬರಮಾಡಿ ಅವನ ಪಕ್ಕೆಯ ಎಲುಬುಗಳಲ್ಲಿ ಒಂದನ್ನು ತೆಗೆದುಕೊಂಡು ಅದರ ಸ್ಥಳವನ್ನು ಮಾಂಸದಿಂದ ಮುಚ್ಚಿ 22ತಾನು ಮನುಷ್ಯನಿಂದ ತೆಗೆದಿದ್ದ ಎಲುಬನ್ನು ಸ್ತ್ರೀಯಾಗ ಮಾಡಿ ಆಕೆಯನ್ನು ಅವನ ಬಳಿಗೆ ಕರತಂದನು. 23ಅವನು ಆಕೆಯನ್ನು ನೋಡಿ-
ಈಗ ಸರಿ; ಈಕೆಯು ನನ್ನ ಎಲುಬುಗಳಿಂದ ಬಂದ ಎಲುಬೂ
ನನ್ನ ಮಾಂಸದಿಂದ ಬಂದ ಮಾಂಸವೂ ಆಗಿದ್ದಾಳೆ;
ಈಕೆಯು ನರನಿಂದ ಉತ್ಪತ್ತಿಯಾದ ಕಾರಣ ನಾರೀ ಎನ್ನಿಸಿಕೊಳ್ಳುವಳು
ಅಂದನು. 24ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು.#2.24 ಅಥವಾ: ಶರೀರವಾಗುತ್ತಾರೆ. 25ಆ ಸ್ತ್ರೀಪುರುಷರಿಬ್ಬರು ಬೆತ್ತಲೆಯಾಗಿದ್ದರೂ ನಾಚಿಕೊಳ್ಳಲಿಲ್ಲ.

Markering

Del

Kopiér

None

Vil du have dine markeringer gemt på tværs af alle dine enheder? Tilmeld dig eller log ind

YouVersion bruger cookies til at personliggøre din oplevelse. Når du bruger vores hjemmeside, accepterer du vores brug af cookies som beskrevet i vores privatlivspolitik