YouVersion Logo
Search Icon

ಮತ್ತಾಯ 2

2
ಪೂರ್ವದೇಶದ ಜ್ಞಾನಿಗಳ ಭೇಟಿ
1ಹೆರೋದ ರಾಜನ ಕಾಲದಲ್ಲಿ, ಯೂದಾಯದ ಬೇತ್ಲೆಹೇಮಿನಲ್ಲಿ ಯೇಸು ಜನಿಸಿದಾಗ, ಪೂರ್ವ ದೇಶದಿಂದ ಜ್ಞಾನಿಗಳು ಯೆರೂಸಲೇಮಿಗೆ ಬಂದು, 2“ಯೆಹೂದ್ಯರ ಅರಸರಾಗಿ ಹುಟ್ಟಿದವರು ಎಲ್ಲಿ? ನಾವು ಅವರನ್ನು ಸೂಚಿಸುವ ನಕ್ಷತ್ರವನ್ನು ಪೂರ್ವದೇಶದಲ್ಲಿ ಕಂಡು ಅವರನ್ನು ಆರಾಧಿಸಲು ಬಂದಿದ್ದೇವೆ,” ಎಂದರು.
3ಇದನ್ನು ಕೇಳಿ ಹೆರೋದ ರಾಜನು ಮತ್ತು ಯೆರೂಸಲೇಮಿನ ಜನರೆಲ್ಲರು ಕಳವಳಗೊಂಡರು. 4ರಾಜನು ಯೆಹೂದ್ಯರ ಮುಖ್ಯಯಾಜಕರನ್ನೂ ನಿಯಮ ಬೋಧಕರನ್ನೂ ಕರೆದು, “ಕ್ರಿಸ್ತನು ಹುಟ್ಟಬೇಕಾದದ್ದು ಎಲ್ಲಿ?” ಎಂದು ಅವರನ್ನು ವಿಚಾರಿಸಿದನು. 5ಅದಕ್ಕೆ ಅವರು, “ಯೂದಾಯ ಪ್ರಾಂತದ ಬೇತ್ಲೆಹೇಮಿನಲ್ಲಿಯೇ,” ಏಕೆಂದರೆ, ಪ್ರವಾದಿಯು ಬರೆದಿರುವದು ಈ ರೀತಿಯಾಗಿದೆ:
6“ ‘ಯೆಹೂದ ಪ್ರಾಂತದಲ್ಲಿರುವ ಬೇತ್ಲೆಹೇಮೇ,
ಯೆಹೂದದ ಅಧಿಪತಿಗಳಲ್ಲಿ ನೀನು ಎಷ್ಟು ಮಾತ್ರಕ್ಕೂ ಅಲ್ಪವಲ್ಲ.
ಏಕೆಂದರೆ ನನ್ನ ಪ್ರಜೆಗಳಾದ ಇಸ್ರಾಯೇಲನ್ನು
ಪರಿಪಾಲಿಸಲು ಒಬ್ಬ ಅಧಿಪತಿಯು ನಿನ್ನೊಳಗಿಂದಲೇ ಬರುವನು,’#2:6 ಮೀಕ 5:2,4
ಎಂದು ಹೇಳಿದರು.
7ಆಗ ಹೆರೋದನು ಆ ಜ್ಞಾನಿಗಳನ್ನು ರಹಸ್ಯವಾಗಿ ಕರೆದು, ಆ ನಕ್ಷತ್ರ ಕಾಣಿಸಿಕೊಂಡ ಕಾಲವನ್ನು ಸೂಕ್ಷ್ಮವಾಗಿ ವಿಚಾರಿಸಿದನು. 8“ನೀವು ಹೋಗಿ ಆ ಮಗುವಿನ ವಿಷಯ ಜಾಗರೂಕತೆಯಿಂದ ವಿಚಾರಿಸಿ. ಆ ಮಗು ಸಿಕ್ಕಿದ ಮೇಲೆ ನನಗೆ ತಿಳಿಸಿರಿ, ಆಗ ನಾನೂ ಬಂದು ಅದನ್ನು ಆರಾಧಿಸುವೆನು,” ಎಂದು ಹೇಳಿ ಅವರನ್ನು ಬೇತ್ಲೆಹೇಮಿಗೆ ಕಳುಹಿಸಿದನು.
9ರಾಜನ ಮಾತನ್ನು ಕೇಳಿ ಅವರು ಹೊರಟಾಗ, ಪೂರ್ವದೇಶದಲ್ಲಿ ಅವರು ಕಂಡ ನಕ್ಷತ್ರವು ಪುನಃ ಕಾಣಿಸಿಕೊಂಡು, ಅವರ ಮುಂದೆ ಮುಂದೆ ಸಾಗುತ್ತಾ, ಆ ಮಗು ಇದ್ದ ಸ್ಥಳದ ಮೇಲೆ ಬಂದು ನಿಂತಿತು. 10ಅವರು ನಕ್ಷತ್ರವನ್ನು ಕಂಡು, ಬಹಳವಾಗಿ ಸಂತೋಷಪಟ್ಟರು. 11ಜ್ಞಾನಿಗಳು ಮನೆಯನ್ನು ಪ್ರವೇಶಿಸಿ, ಮಗುವನ್ನು ತಾಯಿ ಮರಿಯಳ ಬಳಿ ಕಂಡು, ಮಗುವಿಗೆ ಅಡ್ಡಬಿದ್ದು ಆರಾಧಿಸಿದರು. ತಮ್ಮ ಬೊಕ್ಕಸಗಳನ್ನು ತೆರೆದು ಮಗುವಿಗೆ ಚಿನ್ನ, ಧೂಪ ಮತ್ತು ರಕ್ತಬೋಳಗಳನ್ನು#2:11 ರಕ್ತಬೋಳ ಒಂದು ವಿಧವಾದ ಅರಬ್ ದೇಶದ ಮರದ ರಸಗಂಧ ಕಾಣಿಕೆಯಾಗಿ ಸಮರ್ಪಿಸಿದರು. 12ಅನಂತರ ಅವರು ಕನಸಿನಲ್ಲಿ ಹೆರೋದನ ಬಳಿಗೆ ಹಿಂತಿರುಗಬಾರದೆಂಬ ಎಚ್ಚರಿಕೆಯನ್ನು ಹೊಂದಿದ್ದರಿಂದ, ಬೇರೆ ದಾರಿಯಿಂದ ತಮ್ಮ ದೇಶಕ್ಕೆ ಹೊರಟು ಹೋದರು.
ಈಜಿಪ್ಟಿಗೆ ಪಲಾಯನ
13ಆ ಜ್ಞಾನಿಗಳು ಹೊರಟುಹೋದ ಮೇಲೆ, ಕರ್ತನ ದೂತನು ಯೋಸೇಫನಿಗೆ ಕನಸಿನಲ್ಲಿ ಪ್ರತ್ಯಕ್ಷನಾಗಿ, “ಎದ್ದೇಳು, ಮಗುವನ್ನೂ ತಾಯಿಯನ್ನೂ ಕರೆದುಕೊಂಡು ಈಜಿಪ್ಟಿಗೆ ಓಡಿಹೋಗು. ನಾನು ನಿನಗೆ ತಿಳಿಸುವವರೆಗೆ ಅಲ್ಲಿಯೇ ಇರು, ಏಕೆಂದರೆ ಹೆರೋದನು ಮಗುವನ್ನು ಹುಡುಕಿ ಕೊಲ್ಲಬೇಕೆಂದಿದ್ದಾನೆ,” ಎಂದನು.
14ಆಗ ಯೋಸೇಫನು ಎದ್ದು, ಆ ಮಗುವನ್ನೂ ತಾಯಿಯನ್ನೂ ಕರೆದುಕೊಂಡು ಅದೇ ರಾತ್ರಿ ಈಜಿಪ್ಟಿಗೆ ಹೊರಟುಹೋದನು. 15ಹೀಗೆ ಹೆರೋದನು ಸಾಯುವವರೆಗೆ ಯೋಸೇಫನು ಅಲ್ಲೇ ಇದ್ದನು. ಕರ್ತನು ತನ್ನ ಪ್ರವಾದಿಯ ಮೂಲಕ: “ಈಜಿಪ್ಟಿನಿಂದ ನನ್ನ ಮಗನನ್ನು ನಾನು ಕರೆದೆನು,”#2:15 ಹೋಶೇ 11:1 ಎಂದು ಹೇಳಿದ ಮಾತು ಇದರಿಂದ ನೆರವೇರಿತು.
16ಜ್ಞಾನಿಗಳು ತನಗೆ ಮೋಸಮಾಡಿದರೆಂದು ತಿಳಿದ ಹೆರೋದನು ಬಹಳ ಕೋಪಗೊಂಡನು, ಜ್ಞಾನಿಗಳಿಂದ ಸೂಕ್ಷ್ಮವಾಗಿ ವಿಚಾರಿಸಿಕೊಂಡ ಪ್ರಕಾರವೇ, ಬೇತ್ಲೆಹೇಮ್ ಮತ್ತು ಅದರ ಸುತ್ತಮುತ್ತಲ ಪ್ರದೇಶದಲ್ಲಿದ್ದ ಎರಡು ವರ್ಷದೊಳಗಿನ ಎಲ್ಲಾ ಗಂಡು ಮಕ್ಕಳನ್ನು ಕೊಂದುಹಾಕಿಸಿದನು. 17ಪ್ರವಾದಿಯಾದ ಯೆರೆಮೀಯನ ಮೂಲಕ ಹೇಳಿದ ಮಾತು ನೆರವೇರಿತು:
18“ರಾಮದಲ್ಲಿ ರೋದನೆಯು ಕೇಳಿಸಿತು,
ಗೋಳಾಟವೂ ಮಹಾ ಪ್ರಲಾಪವೂ ಕೇಳಿಬಂತು.
ರಾಹೇಲಳು ತನ್ನ ಮಕ್ಕಳಿಗಾಗಿ ಗೋಳಾಡುತ್ತಾ,
ಆದರಣೆ ಹೊಂದದೆ ಹೋಗಿದ್ದಾಳೆ.
ಏಕೆಂದರೆ ಅವಳ ಮಕ್ಕಳು ಇನ್ನಿಲ್ಲ.”#2:18 ಯೆರೆ 31:15
ನಜರೇತಿಗೆ ಹಿಂದಿರುಗುವಿಕೆ
19ಹೆರೋದನು ಸತ್ತಮೇಲೆ ಈಜಿಪ್ಟಿನಲ್ಲಿದ್ದ ಯೋಸೇಫನಿಗೆ ಕರ್ತನ ದೂತನು ಕನಸಿನಲ್ಲಿ ಕಾಣಿಸಿಕೊಂಡು, 20“ಎದ್ದೇಳು, ಮಗುವನ್ನೂ ತಾಯಿಯನ್ನೂ ಕರೆದುಕೊಂಡು ಇಸ್ರಾಯೇಲ್ ದೇಶಕ್ಕೆ ಹಿಂದಿರುಗು, ಮಗುವಿನ ಪ್ರಾಣ ತೆಗೆಯಬೇಕೆಂದಿದ್ದವರು ಸತ್ತುಹೋದರು,” ಎಂದು ಹೇಳಿದನು.
21ಆಗ ಅವನು ಎದ್ದು ಮಗುವನ್ನೂ ತಾಯಿಯನ್ನೂ ಕರೆದುಕೊಂಡು ಇಸ್ರಾಯೇಲ್ ದೇಶಕ್ಕೆ ಬಂದನು. 22ಆದರೆ ಹೆರೋದನ ಮಗ ಅರ್ಖೆಲಾಯನು, ತಂದೆಯ ಬದಲಾಗಿ ಯೂದಾಯ ಪ್ರಾಂತವನ್ನು ಆಳುತ್ತಿದ್ದಾನೆಂದು ಕೇಳಿ, ಅಲ್ಲಿಗೆ ಹೋಗಲು ಭಯಪಟ್ಟನು. ಆಗ ಕನಸಿನಲ್ಲಿ ಹೊಂದಿದ ಎಚ್ಚರಿಕೆಯ ಪ್ರಕಾರ ಯೋಸೇಫನು ಗಲಿಲಾಯ ಪ್ರಾಂತಕ್ಕೆ ಹೋದನು. 23ಅಲ್ಲಿ ನಜರೇತ್ ಎಂಬ ಊರಲ್ಲಿ ವಾಸಮಾಡಿದನು. ಹೀಗೆ, “ನಜರಾಯನೆಂಬ ಹೆಸರು ಯೇಸುವಿಗೆ ಬರುವುದು,” ಎಂದು ಪ್ರವಾದಿಗಳು ಹೇಳಿದ ಮಾತು ನೆರವೇರಿತು.

Currently Selected:

ಮತ್ತಾಯ 2: KSB

Highlight

Share

Copy

None

Want to have your highlights saved across all your devices? Sign up or sign in