ಲೂಕ 7
7
ಶತಾಧಿಪತಿಯ ವಿಶ್ವಾಸ
1ತಮ್ಮ ಎಲ್ಲಾ ಮಾತುಗಳನ್ನು ಜನರೆಲ್ಲರೂ ಕೇಳುವಂತೆ ಹೇಳಿ ಮುಗಿಸಿದ ಮೇಲೆ, ಯೇಸು ಕಪೆರ್ನೌಮಿಗೆ ಪ್ರವೇಶಿಸಿದರು. 2ಆಗ ಒಬ್ಬ ಶತಾಧಿಪತಿಗೆ,#7:2 ಶತಾಧಿಪತಿ ನೂರು ಮಂದಿ ಸೈನಿಕರಿಗೆ ಅಧಿಪತಿ ಪ್ರಿಯನಾಗಿದ್ದ ಸೇವಕ, ಅಸ್ವಸ್ಥನಾಗಿ ಸಾಯುವುದರಲ್ಲಿದ್ದನು. 3ಅವನು ಯೇಸುವಿನ ವಿಷಯ ಕೇಳಿದಾಗ, ಬಂದು ತನ್ನ ಸೇವಕನನ್ನು ಗುಣಮಾಡಬೇಕೆಂದು ಬೇಡಿಕೊಳ್ಳುವಂತೆ ಯೆಹೂದ್ಯರ ಹಿರಿಯರನ್ನು ಅವರ ಬಳಿಗೆ ಕಳುಹಿಸಿದನು. 4ಅವರು ಯೇಸುವಿನ ಬಳಿಗೆ ಬಂದು ಅವರಿಗೆ, “ನೀವು ಇದನ್ನು ಮಾಡುವುದಕ್ಕೆ ಅವನು ಯೋಗ್ಯನು, 5ಏಕೆಂದರೆ ಅವನು ನಮ್ಮ ಜನಾಂಗವನ್ನು ಪ್ರೀತಿಸುವುದಲ್ಲದೆ ನಮಗಾಗಿ ಒಂದು ಸಭಾಮಂದಿರವನ್ನು ಕಟ್ಟಿಸಿದ್ದಾನೆ,” ಎಂದು ಆಸಕ್ತಿಯಿಂದ ಬೇಡಿಕೊಂಡರು. 6ಯೇಸು ಅವರೊಂದಿಗೆ ಹೋದರು.
ಅವರು ಮನೆಗೆ ಇನ್ನೂ ಸ್ವಲ್ಪ ದೂರ ಇರುವಾಗಲೇ ಶತಾಧಿಪತಿಯು ಸ್ನೇಹಿತರನ್ನು ಯೇಸುವಿನ ಬಳಿಗೆ ಕಳುಹಿಸಿ, “ಕರ್ತದೇವರೇ, ನಿಮ್ಮನ್ನು ತೊಂದರೆ ಪಡಿಸಿಕೊಳ್ಳಬೇಡಿರಿ, ನನ್ನ ಮನೆಯೊಳಗೆ ನೀವು ಬರುವಷ್ಟು ಯೋಗ್ಯತೆ ನನಗಿಲ್ಲ. 7ನಾನು ನಿಮ್ಮ ಬಳಿಗೆ ಬರುವುದಕ್ಕೆ ಯೋಗ್ಯನೆಂದು ಎಣಿಸಿಕೊಳ್ಳಲಿಲ್ಲ. ಆದರೆ ನೀವು ಒಂದು ಮಾತು ಹೇಳಿರಿ, ಆಗ ನನ್ನ ಸೇವಕ ಗುಣಹೊಂದುವನು. 8ನಾನು ಸಹ ಮತ್ತೊಬ್ಬ ಅಧಿಕಾರಿಯ ಕೈಕೆಳಗಿರುವವನು, ನನ್ನ ಅಧೀನದಲ್ಲಿಯೂ ಸೈನಿಕರಿದ್ದಾರೆ ಮತ್ತು ನಾನು ಒಬ್ಬನಿಗೆ, ‘ಹೋಗು,’ ಎಂದರೆ ಅವನು ಹೋಗುತ್ತಾನೆ, ಮತ್ತೊಬ್ಬನಿಗೆ ‘ಬಾ,’ ಎಂದರೆ ಅವನು ಬರುತ್ತಾನೆ. ನನ್ನ ಸೇವಕನಿಗೆ, ‘ಇದನ್ನು ಮಾಡು,’ ಎಂದರೆ ಅವನು ಮಾಡುತ್ತಾನೆ,” ಎಂದು ಹೇಳಿ ಕಳುಹಿಸಿದನು.
9ಯೇಸು ಅವನ ಈ ಮಾತುಗಳನ್ನು ಕೇಳಿದಾಗ, ಆಶ್ಚರ್ಯಪಟ್ಟು ತಿರುಗಿಕೊಂಡು ತಮ್ಮನ್ನು ಹಿಂಬಾಲಿಸುತ್ತಿದ್ದ ಗುಂಪಿಗೆ, “ನಾನು ನಿಮಗೆ ಹೇಳುವುದೇನೆಂದರೆ, ಇಂಥ ಮಹಾ ನಂಬಿಕೆಯನ್ನು ನಾನು ಇಸ್ರಾಯೇಲ್ ಜನರಲ್ಲಿಯೂ ಸಹ ಕಾಣಲಿಲ್ಲ,” ಎಂದರು. 10ಶತಾಧಿಪತಿಯ ಕಡೆಯಿಂದ ಬಂದವರು ಮನೆಗೆ ಹಿಂದಿರುಗಿದಾಗ ಅಸ್ವಸ್ಥನಾಗಿದ್ದ ಆ ಸೇವಕ ಸ್ವಸ್ಥನಾಗಿರುವುದನ್ನು ಕಂಡರು.
ಸತ್ತು ಹೋಗಿದ್ದ ವಿಧವೆಯ ಮಗನನ್ನು ಬದುಕಿಸಿದ್ದು
11ಇದಾದ ಮೇಲೆ, ಯೇಸು ನಾಯಿನ್ ಎಂಬ ಪಟ್ಟಣಕ್ಕೆ ಹೋದರು. ಆಗ ಅವರ ಶಿಷ್ಯರೂ ಜನರ ದೊಡ್ಡ ಗುಂಪೂ ಅವರ ಸಂಗಡ ಹೋದರು. 12ಯೇಸು ಪಟ್ಟಣ ದ್ವಾರದ ಸಮೀಪಕ್ಕೆ ಬಂದಾಗ, ಸತ್ತು ಹೋಗಿದ್ದ ಒಬ್ಬನನ್ನು ಹೊತ್ತುಕೊಂಡು ಹೋಗುತ್ತಿದ್ದರು, ಅವನು ತನ್ನ ತಾಯಿಗೆ ಒಬ್ಬನೇ ಮಗನು, ಆಕೆಯು ವಿಧವೆಯಾಗಿದ್ದಳು. ಪಟ್ಟಣದ ಬಹಳ ಜನರು ಆಕೆಯೊಂದಿಗೆ ಇದ್ದರು. 13ಕರ್ತದೇವರು ಆಕೆಯನ್ನು ಕಂಡು, ಆಕೆಯ ಮೇಲೆ ಕನಿಕರಪಟ್ಟು, “ಅಳಬೇಡ” ಎಂದರು.
14ಅನಂತರ ಯೇಸು ಬಂದು ಶವದ ಚಟ್ಟವನ್ನು ಮುಟ್ಟಿದಾಗ, ಅದನ್ನು ಹೊತ್ತುಕೊಂಡಿದ್ದವರು ಹಾಗೆಯೇ ನಿಂತರು. ಆಗ ಯೇಸು, “ಯುವಕನೇ, ನಾನು ನಿನಗೆ ಹೇಳುತ್ತೇನೆ, ಎದ್ದೇಳು!” ಎಂದರು. 15ಆಗ ಸತ್ತವನು ಎದ್ದು ಕುಳಿತುಕೊಂಡು ಮಾತನಾಡಲಾರಂಭಿಸಿದನು. ಯೇಸು ಅವನನ್ನು ಅವನ ತಾಯಿಗೆ ಒಪ್ಪಿಸಿದರು.
16ಆಗ ಅವರೆಲ್ಲರೂ ಭಯಭಕ್ತಿಯಿಂದ ಕೂಡಿದವರಾಗಿ, “ನಮ್ಮ ಮಧ್ಯದಲ್ಲಿ ಒಬ್ಬ ಮಹಾ ಪ್ರವಾದಿಯು ಎದ್ದಿದ್ದಾರೆ; ದೇವರು ತಮ್ಮ ಜನರಿಗೆ ಸಹಾಯಮಾಡಲು ಬಂದಿದ್ದಾರೆ,” ಎಂದು ದೇವರನ್ನು ಮಹಿಮೆಪಡಿಸುತ್ತಾ ಹೇಳಿದರು. 17ಯೇಸುವಿನ ವಿಷಯವಾದ ಈ ಸುದ್ದಿಯು ಯೂದಾಯದ ಎಲ್ಲಾ ಪ್ರಾಂತಕ್ಕೂ, ಸುತ್ತಲಿನ ಎಲ್ಲಾ ಪ್ರಾಂತಕ್ಕೂ ಹರಡಿತು.
ಸ್ನಾನಿಕ ಯೋಹಾನನು ಹಾಗೂ ಯೇಸು
18ಯೋಹಾನನ ಶಿಷ್ಯರು ಈ ಎಲ್ಲಾ ವಿಷಯಗಳನ್ನು ಅವನಿಗೆ ತಿಳಿಯಪಡಿಸಿದರು, 19ಆಗ ಯೋಹಾನನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು, “ಬರಬೇಕಾದ ಕ್ರಿಸ್ತನು ನೀನೋ#7:19 ಯೆಹೂದ್ಯರು ಕ್ರಿಸ್ತನನ್ನು ಮೆಸ್ಸೀಯನನ್ನು ಎದುರುನೋಡುತ್ತಿದ್ದರು, ಆದ್ದರಿಂದ ಯೋಹಾನನು ಈ ಪ್ರಶ್ನೆಯನ್ನು ಕೇಳಿದನು ಇಲ್ಲವೇ ನಾವು ಇನ್ನೊಬ್ಬನಿಗಾಗಿ ಎದುರು ನೋಡಬೇಕೋ?” ಎಂದು ಕರ್ತದೇವರನ್ನು ಕೇಳಲು ಅವರ ಬಳಿಗೆ ಕಳುಹಿಸಿದನು.
20ಅವರು ಯೇಸುವಿನ ಬಳಿಗೆ ಬಂದು, “ ‘ಬರಬೇಕಾದವರು ನೀವೋ? ಇಲ್ಲವೆ ನಾವು ಬೇರೊಬ್ಬರಿಗಾಗಿ ಎದುರು ನೋಡಬೇಕೋ?’ ಎಂದು ಕೇಳುವುದಕ್ಕಾಗಿ ಸ್ನಾನಿಕ ಯೋಹಾನನು ನಮ್ಮನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ,” ಎಂದು ಹೇಳಿದರು.
21ಅದೇ ಸಮಯದಲ್ಲಿ ರೋಗಗಳಿಂದಲೂ ವ್ಯಾಧಿಗಳಿಂದಲೂ ದುರಾತ್ಮಗಳಿಂದಲೂ ಪೀಡಿತರಾದ ಅನೇಕರನ್ನು ಯೇಸು ಗುಣಪಡಿಸುತ್ತಿದ್ದರು, ಕುರುಡರಾದ ಅನೇಕರಿಗೆ ದೃಷ್ಟಿ ನೀಡುತ್ತಿದ್ದರು. 22ತರುವಾಯ ಯೇಸು ಅವರಿಗೆ, “ನೀವು ಕಂಡು ಕೇಳಿದವುಗಳನ್ನು ಹೋಗಿ ಯೋಹಾನನಿಗೆ ತಿಳಿಸಿರಿ: ಕುರುಡರು ನೋಡುತ್ತಾರೆ, ಕುಂಟರು ನಡೆಯುತ್ತಾರೆ, ಕುಷ್ಠರೋಗಿಗಳು ಶುದ್ಧರಾಗುತ್ತಾರೆ, ಕಿವುಡರು ಕೇಳುತ್ತಾರೆ, ಮರಣಹೊಂದಿದವರು ಜೀವ ಪಡೆಯುತ್ತಾರೆ ಮತ್ತು ಬಡವರಿಗೆ ಸುವಾರ್ತೆ ಸಾರಲಾಗುತ್ತದೆ.#7:22 ಯೆಶಾಯ 35:5,6; 61:1 23ನನ್ನ ವಿಷಯದಲ್ಲಿ ವಿಶ್ವಾಸ ಕಳೆದುಕೊಳ್ಳದವನೇ ಧನ್ಯನು,” ಎಂದರು.
24ಯೋಹಾನನ ಶಿಷ್ಯರು ಹೊರಟುಹೋದ ಮೇಲೆ, ಯೇಸು ಯೋಹಾನನ ವಿಷಯವಾಗಿ ಮಾತನಾಡಲಾರಂಭಿಸಿ ಜನರಿಗೆ, “ನೀವು ಯಾವುದನ್ನು ಕಾಣುವುದಕ್ಕಾಗಿ ಅರಣ್ಯಕ್ಕೆ ಹೋದಿರಿ? ಗಾಳಿಗೆ ಓಲಾಡುವ ದಂಟನ್ನೋ? 25ಇಲ್ಲವಾದರೆ, ನೀವು ಏನನ್ನು ಕಾಣುವುದಕ್ಕಾಗಿ ಹೋದಿರಿ? ನಯವಾದ ಉಡುಪನ್ನು ಧರಿಸಿದ್ದ ಮನುಷ್ಯನನ್ನೋ? ಶೋಭಾಯಮಾನವಾದ ಉಡುಪನ್ನು ಧರಿಸಿಕೊಂಡು ಸುಖವಾಗಿ ಜೀವಿಸುವವರು ಅರಮನೆಗಳಲ್ಲಿ ಇರುತ್ತಾರೆ. 26ಹಾಗಾದರೆ ಏನು ಕಾಣುವುದಕ್ಕಾಗಿ ಹೋದಿರಿ? ಒಬ್ಬ ಪ್ರವಾದಿಯನ್ನೋ? ಹೌದು, ಪ್ರವಾದಿಗಿಂತಲೂ ಹೆಚ್ಚಿನವನನ್ನು ನೋಡಿದಿರಿ, ಎಂದು ನಾನು ನಿಮಗೆ ಹೇಳುತ್ತೇನೆ. 27ಯಾರ ವಿಷಯವಾಗಿ ಪವಿತ್ರ ವೇದದಲ್ಲಿ ಬರೆದಿತ್ತೋ ಅವನೇ ಇವನು:
“ ‘ಇಗೋ, ನಿನ್ನ ದಾರಿಯನ್ನು ನಿನ್ನ ಮುಂದೆ ಸಿದ್ಧಮಾಡುವಂತೆ
ನನ್ನ ದೂತನನ್ನು ನಿನ್ನ ಮುಂದೆ ಕಳುಹಿಸುತ್ತೇನೆ,’#7:27 ಮಲಾಕಿ 3:1
28ನಾನು ನಿಮಗೆ ಹೇಳುವುದೇನೆಂದರೆ, ಸ್ತ್ರೀಯರಲ್ಲಿ ಹುಟ್ಟಿದವರಲ್ಲಿ ಸ್ನಾನಿಕ ಯೋಹಾನನಿಗಿಂತ ದೊಡ್ಡವನು ಇಲ್ಲ; ಆದರೆ ದೇವರ ರಾಜ್ಯದಲ್ಲಿ ಅತ್ಯಂತ ಚಿಕ್ಕವನು ಅವನಿಗಿಂತಲೂ ದೊಡ್ಡವನಾಗಿದ್ದಾನೆ,” ಎಂದರು.
29ಯೋಹಾನನಿಂದ ಉಪದೇಶ ಕೇಳಿದ ಎಲ್ಲಾ ಜನರೂ ಸುಂಕದವರೂ ಸಹ, ಯೇಸುವಿನ ಮಾತುಗಳನ್ನು ಕೇಳಿದಾಗ, ದೇವರ ಮಾರ್ಗವು ಸರಿಯಾಗಿದೆಯೆಂದು ಒಪ್ಪಿಕೊಂಡರು, ಏಕೆಂದರೆ ಅವರು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಂಡಿದ್ದರು. 30ಆದರೆ ಫರಿಸಾಯರೂ ಮೋಶೆಯ ನಿಯಮ ಪಂಡಿತರೂ ಅವನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳದೆ ಹೋದದ್ದರಿಂದ ತಮ್ಮ ವಿಷಯದಲ್ಲಿರುವ ದೇವರ ಸಂಕಲ್ಪವನ್ನು ತಿರಸ್ಕಾರ ಮಾಡಿದರು.
31ಅನಂತರ ಯೇಸು ಜನರಿಗೆ, “ಈ ಕಾಲದ ಜನರನ್ನು, ನಾನು ಯಾವುದಕ್ಕೆ ಹೋಲಿಸಲಿ? ಅವರು ಯಾವುದಕ್ಕೆ ಹೋಲಿಕೆಯಾಗಿದ್ದಾರೆ? 32ಅವರು ಸಂತೆಯಲ್ಲಿ ಕುಳಿತುಕೊಂಡು ಒಬ್ಬರನ್ನೊಬ್ಬರು ಕರೆಯುತ್ತಾ:
“ ‘ನಾವು ನಿಮಗಾಗಿ ಕೊಳಲೂದಿದೆವು,
ನೀವು ಕುಣಿಯಲಿಲ್ಲ,
ನಾವು ನಿಮಗಾಗಿ ಶೋಕಗೀತೆ ಹಾಡಿದೆವು,
ನೀವು ಅಳಲಿಲ್ಲ,’
ಎಂದು ಹೇಳುವ ಮಕ್ಕಳಿಗೆ ಹೋಲಿಕೆಯಾಗಿದ್ದಾರೆ.
33“ಸ್ನಾನಿಕ ಯೋಹಾನನು ರೊಟ್ಟಿಯನ್ನು ತಿನ್ನದೆಯೂ ದ್ರಾಕ್ಷಾರಸವನ್ನು ಕುಡಿಯದೆಯೂ ಬಂದನು, ಅದಕ್ಕೆ ನೀವು, ‘ಅವನಿಗೆ ದೆವ್ವ ಹಿಡಿದಿದೆ,’ ಎನ್ನುತ್ತೀರಿ. 34ಮನುಷ್ಯಪುತ್ರನಾದ ನಾನು ಅನ್ನಪಾನ ಸೇವಿಸುವವನಾಗಿ ಬಂದೆನು, ಆದರೆ ನೀವು, ‘ಇಗೋ, ಹೊಟ್ಟೆಬಾಕನು, ಕುಡುಕನು, ಸುಂಕದವರ ಮತ್ತು ಪಾಪಿಗಳ ಸ್ನೇಹಿತನು,’ ಎನ್ನುತ್ತೀರಿ. 35ಆದರೆ ಜ್ಞಾನವನ್ನು ಅನ್ವಯಿಸಿಕೊಳ್ಳುವಾಗಲೇ ಜ್ಞಾನದ ಗುಣಲಕ್ಷಣಗಳು ಸ್ಪಷ್ಟವಾಗಿರುವುದು,” ಎಂದರು.
ಪಾಪಿಯಾದ ಸ್ತ್ರೀಯಿಂದ ಯೇಸು ಅಭಿಷೇಕ ಹೊಂದಿದ್ದು
36ಆಗ ಫರಿಸಾಯರಲ್ಲಿ ಒಬ್ಬನು ಯೇಸು ತನ್ನೊಂದಿಗೆ ಊಟ ಮಾಡಬೇಕೆಂದು ಅಪೇಕ್ಷಿಸಿದನು, ಆಗ ಯೇಸು ಆ ಫರಿಸಾಯನ ಮನೆಯೊಳಕ್ಕೆ ಹೋಗಿ ಊಟಕ್ಕೆ ಕುಳಿತುಕೊಂಡರು. 37ಆ ಪಟ್ಟಣದಲ್ಲಿದ್ದ ಫರಿಸಾಯನ ಮನೆಯಲ್ಲಿ ಯೇಸು ಊಟಕ್ಕೆ ಕುಳಿತುಕೊಂಡಿದ್ದಾರೆಂದು ಒಬ್ಬ ಪಾಪಿ ಸ್ತ್ರೀಯು ತಿಳಿದು, ಸುಗಂಧ ತೈಲದ ಭರಣಿಯನ್ನು ತಂದು, 38ಅವರ ಪಾದಗಳ ಬಳಿಯಲ್ಲಿ ನಿಂತು, ಅಳುತ್ತಾ ಅವರ ಪಾದಗಳನ್ನು ಕಣ್ಣೀರಿನಿಂದ ತೊಳೆಯಲಾರಂಭಿಸಿ, ತನ್ನ ತಲೆಕೂದಲಿನಿಂದ ಒರೆಸಿ, ಅವರ ಪಾದಗಳಿಗೆ ಮುದ್ದಿಟ್ಟು ಆ ತೈಲವನ್ನು ಹಚ್ಚಿದಳು.
39ಆಗ ಯೇಸುವನ್ನು ಆಮಂತ್ರಿಸಿದ ಫರಿಸಾಯನು, ಅದನ್ನು ಕಂಡು ತನ್ನೊಳಗೆ, “ಈ ಮನುಷ್ಯ ಒಬ್ಬ ಪ್ರವಾದಿಯಾಗಿದ್ದರೆ, ತನ್ನನ್ನು ಮುಟ್ಟುತ್ತಿದ್ದವಳು ಯಾರು, ಎಂಥಾ ಹೆಂಗಸು ಎಂದು ತಿಳಿದುಕೊಳ್ಳುತ್ತಿದ್ದನು. ಅವಳು ಒಬ್ಬ ಪಾಪಿ,” ಎಂದು ಅಂದುಕೊಂಡನು.
40ಆಗ ಯೇಸು ಅವನಿಗೆ, “ಸೀಮೋನನೇ, ನಾನು ನಿನಗೆ ಹೇಳಬೇಕಾದ ಒಂದು ವಿಷಯವಿದೆ,” ಎಂದರು.
ಸೀಮೋನನು ಯೇಸುವಿಗೆ, “ಗುರುವೇ, ಹೇಳಿ” ಎಂದನು.
41ಆಗ ಯೇಸು, “ಸಾಲಕೊಡುವ ಒಬ್ಬನಿಗೆ ಇಬ್ಬರು ಸಾಲಗಾರರಿದ್ದರು, ಒಬ್ಬನು ಐದು ನೂರು ಬೆಳ್ಳಿ ನಾಣ್ಯಗಳನ್ನೂ,#7:41 ಗ್ರೀಕ್ ಭಾಷೆಯಲ್ಲಿ ದಿನಾರಿ. ರೋಮನ್ನರ ಒಂದು ದಿನಾರಿಯ ಬೆಳ್ಳಿ ನಾಣ್ಯವು, ಒಬ್ಬ ಸಾಮಾನ್ಯ ಕೂಲಿಗಾರನ ಒಂದು ದಿನದ ಕೂಲಿಗೆ ಸಮವಾಗಿತ್ತು. ನೋಡಿರಿ ಮತ್ತಾಯ 20:2 ಮತ್ತೊಬ್ಬನು ಐವತ್ತು ಬೆಳ್ಳಿ ನಾಣ್ಯಗಳನ್ನೂ ಕೊಡಬೇಕಾಗಿತ್ತು. 42ಆದರೆ ಅವರಿಬ್ಬರಿಗೂ ಸಾಲತೀರಿಸುವುದಕ್ಕೆ ಹಣ ಇರಲಿಲ್ಲ. ಅವನು ಅವರಿಬ್ಬರ ಸಾಲವನ್ನೂ ರದ್ದುಮಾಡಿಬಿಟ್ಟನು. ಆದ್ದರಿಂದ ಅವರಲ್ಲಿ ಯಾರು ಬಹಳವಾಗಿ ಅವನನ್ನು ಪ್ರೀತಿಸುವರು?” ಎಂದು ಕೇಳಿದರು.
43ಅದಕ್ಕೆ ಸೀಮೋನನು ಉತ್ತರವಾಗಿ, “ಯಾರಿಗೆ ಅವನು ಹೆಚ್ಚಾಗಿ ರದ್ದು ಮಾಡಿದನೋ ಅವನೇ ಎಂದು ತೋರುತ್ತದೆ,” ಎಂದನು.
ಆಗ ಯೇಸು ಅವನಿಗೆ, “ನೀನು ಸರಿಯಾಗಿ ತೀರ್ಪು ಮಾಡಿದೆ,” ಎಂದರು.
44ತರುವಾಯ ಯೇಸು ಆ ಸ್ತ್ರೀಯ ಕಡೆಗೆ ತಿರುಗಿಕೊಂಡು ಸೀಮೋನನಿಗೆ, “ಈ ಸ್ತ್ರೀಯನ್ನು ಕಂಡಿದ್ದೀಯಾ? ನಾನು ನಿನ್ನ ಮನೆಯೊಳಗೆ ಪ್ರವೇಶಿಸಿದಾಗ ನನ್ನ ಪಾದಗಳಿಗೆ ನೀನು ನೀರು ಕೊಡಲಿಲ್ಲ. ಇವಳಾದರೋ ನನ್ನ ಪಾದಗಳನ್ನು ತನ್ನ ಕಣ್ಣೀರಿನಿಂದ ತೊಳೆದು ತನ್ನ ತಲೆಕೂದಲಿನಿಂದ ಅವುಗಳನ್ನು ಒರೆಸಿದ್ದಾಳೆ. 45ನೀನು ನನಗೆ ಮುದ್ದು ಕೊಡಲಿಲ್ಲ. ಆದರೆ ನಾನು ಒಳಗೆ ಬಂದಾಗಿನಿಂದ ಈ ಸ್ತ್ರೀಯು ನನ್ನ ಪಾದಗಳಿಗೆ ಮುದ್ದಿಡುವುದನ್ನು ಬಿಡಲಿಲ್ಲ. 46ನೀನು ನನ್ನ ತಲೆಗೆ ಎಣ್ಣೆ ಹಚ್ಚಲಿಲ್ಲ, ಆದರೆ ಈ ಸ್ತ್ರೀಯು ನನ್ನ ಪಾದಗಳಿಗೆ ಸುಗಂಧ ತೈಲವನ್ನು ಹಚ್ಚಿದ್ದಾಳೆ. 47ಬಹಳವಾಗಿರುವ ಇವಳ ಪಾಪಗಳು ಕ್ಷಮಿಸಲಾಗಿವೆ. ಏಕೆಂದರೆ ಇವಳು ಬಹಳವಾಗಿ ಪ್ರೀತಿಸಿದಳು. ಆದರೆ ಕಡಿಮೆ ಕ್ಷಮೆ ಪಡೆದವನು ಕಡಿಮೆ ಪ್ರೀತಿಸುವನು ಎಂದು ನಾನು ನಿನಗೆ ಹೇಳುತ್ತೇನೆ,” ಎಂದರು.
48ಯೇಸು ಆಕೆಗೆ, “ನಿನ್ನ ಪಾಪಗಳು ಕ್ಷಮಿಸಲಾಗಿವೆ,” ಎಂದರು.
49ಯೇಸುವಿನ ಸಂಗಡ ಊಟಕ್ಕೆ ಕುಳಿತವರು, “ಪಾಪಗಳನ್ನು ಸಹ ಕ್ಷಮಿಸುವುದಕ್ಕೆ ಈತನು ಯಾರು?” ಎಂದು ತಮ್ಮತಮ್ಮೊಳಗೆ ಅಂದುಕೊಳ್ಳಲಾರಂಭಿಸಿದರು.
50ಯೇಸು ಆ ಸ್ತ್ರೀಗೆ, “ನಿನ್ನ ನಂಬಿಕೆಯು ನಿನ್ನನ್ನು ರಕ್ಷಿಸಿದೆ, ಸಮಾಧಾನದಿಂದ ಹೋಗು,” ಎಂದರು.
Currently Selected:
ಲೂಕ 7: KSB
Highlight
Share
Copy
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.