YouVersion Logo
Search Icon

ನೆಹೆ 1

1
ನೆಹೆಮೀಯನ ಪ್ರಾರ್ಥನೆ
1ಹಕಲ್ಯನ ಮಗನಾದ ನೆಹೆಮೀಯನ ಚರಿತ್ರೆ: ಇಪ್ಪತ್ತನೆಯ ವರ್ಷದ ಮಾರ್ಗಶಿರ್ಷ ಮಾಸದಲ್ಲಿ#1:1 ಮಾರ್ಗಶಿರ್ಷ ಮಾಸದಲ್ಲಿ ಖಿಸ್ಲೆವ್ ಅಥವಾ “ಕಿಸ್ಲೇವ್” ತಿಂಗಳು ಬಾಬಿಲೋನಿಯನ್ ಕ್ಯಾಲೆಂಡರ್ನ ಒಂಬತ್ತನೆಯ ತಿಂಗಳಾಗಿದೆ, ಇದು ಹೀಬ್ರೂ ಕ್ಯಾಲೆಂಡರ್ನಲ್ಲಿ ನವೆಂಬರ್ ಮಧ್ಯದಿಂದ ಡಿಸೆಂಬರ್ ಮಧ್ಯದವರೆಗಿನ ಕಾಲಾವಧಿಯಾಗಿದೆ. ನಾನು ಶೂಷನ್ ಪಟ್ಟಣದ ಅರಮನೆಯಲ್ಲಿದ್ದಾಗ,#1:1 ನಾನು ಶೂಷನ್ ಪಟ್ಟಣದ ಅರಮನೆಯಲ್ಲಿದ್ದಾಗ, ಪಾರಸಿಯ ಸಾಮ್ರಾಜ್ಯದ ಅರಸನಾಗಿದ್ದ ಮೊದಲನೆಯ ಅರ್ತಷಸ್ತನ ಆಳ್ವಿಕೆಯಲ್ಲಿ ಅಂದರೆ ಕ್ರಿ.ಪೂ. 465-425 ವರ್ಷಗಳಲ್ಲಿ, ನೆಹೆಮೀಯನು ಎಲಾಮ್ ದೇಶದ ರಾಜಧಾನಿಯಾದ ಶೂಷನ್ ಪಟ್ಟಣದ ಅರಮನೆಯಲ್ಲಿ ವಾಸಿಸುತ್ತಿದ್ದನು. 2ನನ್ನ ಸಹೋದರಲ್ಲಿ ಒಬ್ಬನಾದ ಹನಾನೀಯನೂ, ಬೇರೆ ಕೆಲವರು ಯೆಹೂದ ಜನರೊಂದಿಗೆ, ನನ್ನ ಬಳಿಗೆ ಬಂದರು. ಸೆರೆಯಾಳುಗಳಾಗಿ ಹೋಗಿದ್ದವರಲ್ಲಿ ಕೆಲವು ಯೆಹೂದ್ಯರು ತಪ್ಪಿಸಿಕೊಂಡು ನನ್ನ ಬಳಿಗೆ ಬಂದಾಗ ಯೆರೂಸಲೇಮಿನ ಸಮಾಚಾರವನ್ನು ನಾನು ಅವರ ಹತ್ತಿರ ವಿಚಾರಿಸಿದೆನು. 3ಅವರು ನನಗೆ, “ಸೆರೆಯವರೊಳಗಿಂದ ತಪ್ಪಿಸಿಕೊಂಡು ಬಂದು ಆ ಸಂಸ್ಥಾನದಲ್ಲಿ ವಾಸಿಸುತ್ತಿರುವವರು ಮಹಾ ಕಷ್ಟನಿಂದೆಗಳಿಗೆ ಒಳಗಾಗಿದ್ದಾರೆ; ಯೆರೂಸಲೇಮಿನ ಪೌಳಿಗೋಡೆಯು ಕೆಡವಲ್ಪಟ್ಟಿದೆ; ಅದರ ಬಾಗಿಲುಗಳು ಬೆಂಕಿಯಿಂದ ಸುಡಲ್ಪಟ್ಟಿವೆ” ಎಂದು ಹೇಳಿದರು. 4ನಾನು ಈ ವರ್ತಮಾನವನ್ನು ಕೇಳಿದ ಕ್ಷಣವೇ ನೆಲದ ಮೇಲೆ ಬಿದ್ದು ಅತ್ತೆನು; ಹಲವು ದಿನಗಳವರೆಗೂ ಶೋಕಿಸುತ್ತಾ ಉಪವಾಸವಾಗಿದ್ದು ಪರಲೋಕದ ದೇವರ ಮುಂದೆ ವಿಜ್ಞಾಪನೆ ಮಾಡುತ್ತಾ ಇದ್ದೆನು. 5ಆ ವಿಜ್ಞಾಪನೆಗಳಲ್ಲಿ ನಾನು, “ಯೆಹೋವನೇ, ಮಹೋನ್ನತನೂ, ಭಯಭಕ್ತಿಗೂ ಪಾತ್ರನಾಗಿರುವ ಪರಲೋಕದ ದೇವರೇ, ನಿನ್ನನ್ನು ಪ್ರೀತಿಸಿ ನಿನ್ನ ಆಜ್ಞೆಗಳನ್ನು ಅನುಸರಿಸುವವರಿಗೆ ಮಾಡಿದ ಕೃಪಾವಾಗ್ದಾನಗಳನ್ನು ನೆರವೇರಿಸುವವನೇ, 6ಕೃಪೆಮಾಡಿ ನನ್ನ ಮೊರೆಗೆ ಕಿವಿಗೊಡು, ನನ್ನನ್ನು ಕಟಾಕ್ಷಿಸು, ನಿನ್ನ ಸೇವಕನ ಪ್ರಾರ್ಥನೆಯನ್ನು ಲಾಲಿಸಬೇಕು. ನಾನು ಈಗ ಹಗಲಿರುಳೂ ನಿನ್ನ ಸನ್ನಿಧಿಯಲ್ಲಿ ನಿನ್ನ ಸೇವಕರಾದ ಇಸ್ರಾಯೇಲರಿಗಾಗಿ ಪ್ರಾರ್ಥಿಸುತ್ತಾ ಅವರು ನಿನಗೆ ವಿರುದ್ಧವಾಗಿ ಮಾಡಿದ ಪಾಪಗಳನ್ನು ಅರಿಕೆ ಮಾಡುತ್ತಾ ಇದ್ದೇನೆ; ನಾನೂ, ನನ್ನ ಪೂರ್ವಿಕರೂ ಆ ಪಾಪಗಳಲ್ಲಿ ಪಾಲುಗಾರರಾಗಿದ್ದೇವೆ. 7ನಾವು ನಿನಗೆ ದ್ರೋಹಿಗಳಾಗಿ ನಡೆಯುತ್ತಾ ಬಂದೆವು; ನೀನು ನಿನ್ನ ಸೇವಕನಾದ ಮೋಶೆಯ ಮುಖಾಂತರ ಕೊಟ್ಟ ಆಜ್ಞಾವಿಧಿನ್ಯಾಯಗಳನ್ನು ನಾವು ಕೈಗೊಳ್ಳಲಿಲ್ಲ. 8ಆದರೂ, ನಿನ್ನ ಸೇವಕನಾದ ಮೋಶೆಗೆ ಹೇಳಿದ ಮಾತನ್ನು ನೆನಪಿಸಿಕೊಳ್ಳಿರಿ; ‘ನೀವು ಅವಿಧೇಯರಾಗಿ ನಡೆಯುವುದಾದರೆ ನಾನು ನಿಮ್ಮನ್ನು ಜನಾಂಗಗಳ ಮದ್ಯ ಚದುರಿಸಿಬಿಡುವೆನು; 9ನನಗೆ ಅಭಿಮುಖರಾಗಿ ನನ್ನ ಆಜ್ಞೆಗಳನ್ನು ಅನುಸರಿಸಿ ನಡೆಯುವುದಾದರೆ ನಿಮ್ಮ ಜನರು ಆಕಾಶದ ಕೊನೆಯವರೆಗೆ ಒಯ್ಯಲ್ಪಟ್ಟರೂ ನಾನು ಅವರನ್ನು ಅಲ್ಲಿಂದ ಕೂಡಿಸಿ, ನನ್ನ ನಾಮಸ್ಥಾಪನೆಗೋಸ್ಕರ ಆರಿಸಿದ ಸ್ಥಳಕ್ಕೆ ಮತ್ತೆ ಬರಮಾಡುವೆನು’ ಎಂದು ಹೇಳಿರುವೆಯಲ್ಲಾ; ಆ ಮಾತನ್ನು ನೆನಪು ಮಾಡಿಕೊಳ್ಳಿರಿ.
10“ಅವರು ನಿನ್ನ ಸೇವಕರೂ, ನೀನು ನಿನ್ನ ಮಹಾಶಕ್ತಿ, ಭುಜಪರಾಕ್ರಮಗಳಿಂದ ವಿಮೋಚಿಸಿದ ನಿನ್ನ ಪ್ರಜೆಗಳೂ ಆಗಿರುತ್ತಾರಲ್ಲಾ. 11ಯೆಹೋವನೇ, ಕೃಪೆಮಾಡು; ನಿನ್ನ ಸೇವಕನಾದ ನನ್ನ ಪ್ರಾರ್ಥನೆಗೂ, ನಿನ್ನ ನಾಮ ಸ್ಮರಣೆಯಲ್ಲಿ ಆನಂದಿಸುವ ನಿನ್ನ ಭಕ್ತರ ಪ್ರಾರ್ಥನೆಗೂ ಕಿವಿಗೊಡು. ನಿನ್ನ ಸೇವಕನು ಈಹೊತ್ತು ಈ ಮನುಷ್ಯನ ದಯೆಗೆ ಪಾತ್ರನಾಗಿ ಸಫಲನಾಗುವಂತೆ ಅನುಗ್ರಹಿಸಬೇಕು” ಎಂದು ಪ್ರಾರ್ಥಿಸಿದೆನು.

Currently Selected:

ನೆಹೆ 1: IRVKan

Highlight

Share

Copy

None

Want to have your highlights saved across all your devices? Sign up or sign in

YouVersion uses cookies to personalize your experience. By using our website, you accept our use of cookies as described in our Privacy Policy