YouVersion Logo
Search Icon

ಯೋಹಾ 9

9
ಯೇಸು ಸಬ್ಬತ್ ದಿನದಲ್ಲಿ ಹುಟ್ಟುಕುರುಡನಿಗೆ ಕಣ್ಣುಕೊಟ್ಟಿದ್ದು
1ಯೇಸು ಹಾದು ಹೋಗುತ್ತಿದ್ದಾಗ, ಹುಟ್ಟು ಕುರುಡನಾಗಿದ್ದ ಒಬ್ಬ ಮನುಷ್ಯನನ್ನು ಕಂಡನು. 2ಆತನ ಶಿಷ್ಯರು, “ಗುರುವೇ, ಇವನು ಕುರುಡನಾಗಿ ಹುಟ್ಟಿರುವುದಕ್ಕೆ ಯಾರು ಪಾಪಮಾಡಿದರು? ಇವನೋ ಅಥವಾ ಇವನ ತಂದೆತಾಯಿಗಳೋ?” ಎಂದು ಆತನನ್ನು ಕೇಳಿದರು. 3ಯೇಸು, “ಇವನಾಗಲಿ ಇವನ ತಂದೆತಾಯಿಗಳಾಗಲಿ ಪಾಪ ಮಾಡಲಿಲ್ಲ. ಆದರೆ ದೇವರ ಕ್ರಿಯೆಗಳು ಇವನಲ್ಲಿ ತೋರಿಬರುವುದಕ್ಕಾಗಿ ಹೀಗಾಯಿತು. 4#9:4 ಯೋಹಾ 4:34; 11:9; 12:35; ರೋಮಾ. 13:12:ನನ್ನನ್ನು ಕಳುಹಿಸಿದಾತನ ಕ್ರಿಯೆಗಳನ್ನು ನಾವು ಹಗಲಿರುವಾಗಲೇ ಮಾಡಬೇಕು. ರಾತ್ರಿ ಬರುತ್ತದೆ, ಅದು ಬಂದಾಗ ಯಾರೂ ಕೆಲಸ ಮಾಡಲಾರರು. 5ನಾನು ಲೋಕದಲ್ಲಿರುವಾಗ ಲೋಕಕ್ಕೆ ಬೆಳಕಾಗಿದ್ದೇನೆ” ಎಂದನು. 6ಆತನು ಹೀಗೆ ಹೇಳಿ ನೆಲದ ಮೇಲೆ ಉಗುಳಿ ಆ ಉಗುಳಿನಿಂದ ಕೆಸರು ಮಾಡಿ, ಆ ಕೆಸರನ್ನು ಕುರುಡನ ಕಣ್ಣುಗಳಿಗೆ ಹಚ್ಚಿದನು. 7ಆತನು ಅವನಿಗೆ, “ನೀನು ಹೋಗಿ ಸಿಲೋವ (ಸಿಲೋವ ಎಂದರೆ ‘ಕಳುಹಿಸಲ್ಪಟ್ಟವನು’ ಎಂದರ್ಥ) ಕೊಳದಲ್ಲಿ ತೊಳೆದುಕೋ” ಎಂದನು. ಅವನು ಹೋಗಿ ತೊಳೆದುಕೊಂಡು ದೃಷ್ಟಿಯುಳ್ಳವನಾಗಿ ಬಂದನು. 8ಆಗ ನೆರೆಹೊರೆಯವರು ಅವನು ಮೊದಲು ಭಿಕ್ಷುಕನಾಗಿದ್ದಾಗ ಅವನನ್ನು ನೋಡಿದ್ದವರೂ, “ಭಿಕ್ಷೆಬೇಡುತ್ತಾ ಕುಳಿತುಕೊಂಡಿದ್ದವನು ಇವನೇ ಅಲ್ಲವೇ?” ಎಂದು ವಿಚಾರಿಸಿದರು. 9ಕೆಲವರು, “ಹೌದು ಇವನೇ” ಎಂದರು. ಇನ್ನೂ ಕೆಲವರು, “ಅವನಲ್ಲ ಆದರೆ ಅವನ ಹಾಗೆ ಇದ್ದಾನೆ” ಎಂದರು. ಆದರೆ ಅವನಾದರೋ, “ನಾನೇ ಅವನು” ಎಂದು ಹೇಳಿದನು. 10ಆಗ ಅವರು “ಹಾಗಾದರೆ ನಿನ್ನ ಕಣ್ಣು ಹೇಗೆ ತೆರೆದವು?” ಎಂದು ಅವನನ್ನು ಕೇಳಿದ್ದಕ್ಕೆ, 11ಅವನು, “ಯೇಸು ಎಂಬ ಹೆಸರುಳ್ಳ ಮನುಷ್ಯನು ಮಣ್ಣಿನಲ್ಲಿ ಕೆಸರು ಮಾಡಿ ನನ್ನ ಕಣ್ಣಿಗೆ ಹಚ್ಚಿ ನನಗೆ, ‘ಸಿಲೋವ ಕೊಳಕ್ಕೆ ಹೋಗಿ ತೊಳೆದುಕೋ’ ಎಂದು ಹೇಳಿದನು. ಅದರಂತೆ ನಾನು ಹೋಗಿ ತೊಳೆದುಕೊಂಡೆನು. ಆಗ ನನಗೆ ದೃಷ್ಟಿ ಬಂತು” ಎಂದನು. 12ಅವರು, “ಆತನು ಎಲ್ಲಿದ್ದಾನೆ?” ಎಂದು ಅವನನ್ನು ಕೇಳಿದ್ದಕ್ಕೆ, ಅವನು “ನನಗೆ ಗೊತ್ತಿಲ್ಲ” ಎಂದನು.
ಫರಿಸಾಯರು ಆ ಕುರುಡನನ್ನು ಬಹಿಷ್ಕರಿಸಿದ್ದು
13ಜನರು ಮೊದಲು ಆ ಕುರುಡನಾಗಿದ್ದವನನ್ನು ಫರಿಸಾಯರ ಬಳಿಗೆ ಕರೆದುಕೊಂಡು ಬಂದರು. 14ಯೇಸು ಕೆಸರು ಮಾಡಿ ಅವನಿಗೆ ದೃಷ್ಟಿ ಕೊಟ್ಟ ದಿನವು ಸಬ್ಬತ್ ದಿನವಾಗಿತ್ತು. 15ಆದಕಾರಣ ಆ ಫರಿಸಾಯರು ಸಹ ಅವನನ್ನು ವಿಚಾರಿಸಿ ನಿನಗೆ ಹೇಗೆ ದೃಷ್ಟಿ ಬಂದಿತು ಎಂದು ಪುನಃ ಕೇಳಿದರು. ಅವನು ಅವರಿಗೆ, “ಅವನು ಕೆಸರನ್ನು ನನ್ನ ಕಣ್ಣಿನ ಮೇಲೆ ಇಟ್ಟನು, ನಾನು ತೊಳೆದುಕೊಂಡೆನು, ನನಗೆ ದೃಷ್ಟಿ ಬಂದಿತು” ಎಂದು ಉತ್ತರಕೊಟ್ಟನು. 16ಫರಿಸಾಯರಲ್ಲಿ ಕೆಲವರು, “ಈ ಮನುಷ್ಯನು ದೇವರಿಂದ ಬಂದವನಲ್ಲ, ಏಕೆಂದರೆ ಆತನು ಸಬ್ಬತ್ ದಿನವನ್ನು ಆಚರಿಸುವುದಿಲ್ಲ” ಎಂದರು. ಇನ್ನು ಕೆಲವರು, “ಇಂಥಾ ಮಹತ್ಕಾರ್ಯಗಳನ್ನು ಮಾಡುವುದು ಪಾಪಿಯಾದ ಮನುಷ್ಯನಿಂದ ಹೇಗಾದೀತು?” ಎಂದರು. ಹೀಗೆ ಅವರಲ್ಲಿ ಭೇದವುಂಟಾಯಿತು. 17ಹೀಗಿರಲಾಗಿ ಅವರು ಪುನಃ ಆ ಕುರುಡನನ್ನು, “ಆತನು ನಿನಗೆ ದೃಷ್ಟಿ ಕೊಟ್ಟದ್ದರಿಂದ ನೀನು ಆತನ ವಿಷಯವಾಗಿ ಏನು ಹೇಳುತ್ತೀ?” ಎಂದು ಕೇಳಿದಾಗ, ಅವನು “ಆತನು ಒಬ್ಬ ಪ್ರವಾದಿ” ಎಂದು ಉತ್ತರಕೊಟ್ಟನು.
18ಆದರೆ ದೃಷ್ಟಿ ಹೊಂದಿದವನ ವಿಷಯವಾಗಿ ಆ ಯೆಹೂದ್ಯರು; ಅವನ ತಂದೆತಾಯಿಗಳನ್ನು ಕರೆದು ವಿಚಾರಿಸುವವರೆಗೂ, ಅವನು ಹುಟ್ಟು ಕುರುಡನಾಗಿದ್ದು, ಈಗ ದೃಷ್ಟಿ ಹೊಂದಿದ್ದಾನೆಂಬುದನ್ನು ನಂಬಲಿಲ್ಲ. 19ಅವರು “ಕುರುಡನಾಗಿ ಹುಟ್ಟಿದನೆಂದು ನೀವು ಹೇಳುವ ನಿಮ್ಮ ಮಗನು ಇವನೋ? ಹಾಗಾದರೆ ಈಗ ಇವನಿಗೆ ಹೇಗೆ ದೃಷ್ಟಿ ಬಂದಿತು?” ಎಂದು ಅವರನ್ನು ಕೇಳಿದರು. 20ಅವನ ತಂದೆ ತಾಯಿಗಳು, “ಇವನು ನಮ್ಮ ಮಗನೆಂದೂ ಕುರುಡನಾಗಿ ಹುಟ್ಟಿದನೆಂದೂ ಬಲ್ಲೆವು. 21ಈಗ ಇವನು ನೋಡುವುದು ಹೇಗೆಂದು ನಮಗೆ ಗೊತ್ತಿಲ್ಲ. ಯಾರು ಇವನ ಕಣ್ಣುಗಳನ್ನು ತೆರೆದರೋ ನಮಗೆ ಗೊತ್ತಿಲ್ಲ, ಇವನನ್ನೇ ಕೇಳಿರಿ. ಇವನು ಪ್ರಾಯದವನಾಗಿದ್ದಾನಲ್ಲಾ, ಇವನೇ ತನ್ನ ವಿಷಯವಾಗಿ ಹೇಳುವನು” ಎಂದು ಉತ್ತರಕೊಟ್ಟರು. 22ಅವನ ತಂದೆ ತಾಯಿಗಳು ಯೆಹೂದ್ಯರಿಗೆ ಭಯಪಟ್ಟದ್ದರಿಂದ ಹೀಗೆ ಹೇಳಿದರು. ಏಕೆಂದರೆ #9:22 ಯೋಹಾ 12:42; 16:2:ಯಾರಾದರೂ ಯೇಸುವನ್ನು ಕ್ರಿಸ್ತನೆಂದು ಒಪ್ಪಿಕೊಂಡರೆ ಅವನನ್ನು ಸಭಾಮಂದಿರದಿಂದ ಬಹಿಷ್ಕರಿಸಬೇಕೆಂದು ಯೆಹೂದ್ಯರು ಆಗಲೇ ತೀರ್ಮಾನಿಸಿಕೊಂಡಿದ್ದರು. 23“ಇವನು ಪ್ರಾಯದವನು ಇವನನ್ನೇ ಕೇಳಿರಿ” ಎಂದು ಅವನ ತಂದೆತಾಯಿಗಳು ಹೇಳಿದ್ದಕ್ಕೆ ಇದೇ ಕಾರಣ. 24ಆದಕಾರಣ ಅವರು ಕುರುಡನಾಗಿದ್ದ ಆ ಮನುಷ್ಯನನ್ನು ಎರಡನೆಯ ಸಾರಿ ಕರೆದು, “ನೀನು ದೇವರಿಗೆ ಗೌರವವನ್ನು ಸಲ್ಲಿಸು; ಈ ಮನುಷ್ಯನು ಪಾಪಿಷ್ಠನೆಂದು ನಾವು ಬಲ್ಲೆವು” ಎಂದರು. 25ಅದಕ್ಕೆ ಅವನು, “ಆತನು ಪಾಪಿಷ್ಠನೋ ಏನೋ ನನಗೆ ಗೊತ್ತಿಲ್ಲ, ಒಂದು ಮಾತ್ರ ಬಲ್ಲೆನು ನಾನು ಕುರುಡನಾಗಿದ್ದೆನು; ಈಗ ನಾನು ನೋಡುತ್ತಿದ್ದೇನೆ” ಎಂದನು. 26ಅವರು ಅವನನ್ನು, “ಆತನು ನಿನಗೆ ಏನು ಮಾಡಿದನು? ನಿನ್ನ ಕಣ್ಣುಗಳನ್ನು ಹೇಗೆ ತೆರೆದನು?” ಎಂದು ಕೇಳಿದ್ದಕ್ಕೆ, 27ಅವನು, “ನಿಮಗೆ ಆಗಲೇ ಹೇಳಿದೆನಲ್ಲಾ, ನೀವು ಕೇಳಲಿಲ್ಲ! ನೀವು ಯಾಕೆ ಪುನಃ ಪುನಃ ಕೇಳುತ್ತಿದ್ದೀರಿ? ನೀವು ಸಹ ಆತನ ಶಿಷ್ಯರಾಗುವುದಕ್ಕೆ ಬಯಸುತ್ತಿದ್ದೀರೋ?” ಎಂದನು. 28ಅದಕ್ಕೆ ಅವರು ಅವನನ್ನು ನಿಂದಿಸಿ, “ನೀನು ಆತನ ಶಿಷ್ಯನು. ಆದರೆ ನಾವು ಮೋಶೆಯ ಶಿಷ್ಯರು. 29ಮೋಶೆಯ ಸಂಗಡ ದೇವರು ಮಾತನಾಡಿದನೆಂದು ನಾವು ಬಲ್ಲೆವು, ಆದರೆ ಈತನು ಎಲ್ಲಿಯವನೋ ನಮಗೆ ತಿಳಿಯದು” ಎಂದರು. 30ಅದಕ್ಕೆ ಆ ಮನುಷ್ಯನು, “ಆತನು ನನ್ನ ಕಣ್ಣುಗಳನ್ನು ತೆರೆದರೂ ಆತನು ಎಲ್ಲಿಯವನೆಂದು ನಿಮಗೆ ತಿಳಿಯದೆ ಇರುವುದು ಆಶ್ಚರ್ಯವಲ್ಲವೇ! 31ಪಾಪಿಷ್ಠರ ಪ್ರಾರ್ಥನೆಯನ್ನು ದೇವರು ಕೇಳುವುದಿಲ್ಲ, ಆದರೆ ಯಾರು ಭಕ್ತರಾಗಿದ್ದು ಆತನ ಚಿತ್ತದಂತೆ ನಡೆಯುತ್ತಾರೋ ಅವರ ಪ್ರಾರ್ಥನೆಯನ್ನು ಕೇಳುತ್ತಾನೆಂದು ಬಲ್ಲೆವು. 32ಹುಟ್ಟು ಕುರುಡನಾಗಿದ್ದ ಒಬ್ಬ ಮನುಷ್ಯನ ಕಣ್ಣುಗಳನ್ನು ಯಾವನಾದರೂ ತೆರೆದಿದ್ದನ್ನು ಲೋಕಾದಿಯಿಂದ ಒಬ್ಬನಾದರೂ ಕೇಳಲಿಲ್ಲ. 33ಈತನು ದೇವರಿಂದ ಬಂದವನಲ್ಲದಿದ್ದರೆ ಏನೂ ಮಾಡಲಾರದೆ ಇರುತ್ತಿದ್ದನು” ಎಂದನು. 34ಈ ಮಾತಿಗೆ ಅವರು, “ನೀನು ಕೇವಲ ಪಾಪದಲ್ಲಿ ಹುಟ್ಟಿದವನು, ನೀನು ನಮಗೆ ಉಪದೇಶಮಾಡುತ್ತಿಯೋ?” ಎಂದು ಹೇಳಿ ಅವನನ್ನು ಹೊರಗೆ ಹಾಕಿದರು.
ಆತ್ಮೀಕ ಕುರುಡುತನ
35ಅವನನ್ನು ಹೊರಗೆ ಹಾಕಿದರೆಂದು ಯೇಸು ಕೇಳಿ ಅವನನ್ನು ಕಂಡುಕೊಂಡು, “ನೀನು #9:35 ಕೆಲವು ಪ್ರತಿಗಳಲ್ಲಿ, ದೇವಕುಮಾರನೆಂದು ಬರೆದದೆ. ಯೋಹಾ 10:36; ಮತ್ತಾ 14:33:ಮನುಷ್ಯಕುಮಾರನನ್ನು ನಂಬುತ್ತೀಯೋ?” ಎಂದು ಕೇಳಿದನು. 36ಅದಕ್ಕೆ ಅವನು, “ಕರ್ತನೇ ಆ ಮನುಷ್ಯಕುಮಾರನು ಯಾರು? ನನಗೆ ತಿಳಿಸು, ನಾನು ಆತನಲ್ಲಿ ನಂಬಿಕೆ ಇಡುತ್ತೇನೆ” ಎಂದಾಗ, 37ಯೇಸು, “ನೀನು ಅವನನ್ನು ನೋಡಿದ್ದೀ ಮತ್ತು ನಿನ್ನ ಸಂಗಡ ಮಾತನಾಡುತ್ತಿರುವ ನಾನೇ ಆತನು” ಎಂದು ಹೇಳಿದಾಗ, 38ಅವನು, “ಕರ್ತನೇ, ನಾನು ನಂಬುತ್ತೇನೆ” ಎಂದು ಹೇಳಿ ಆತನಿಗೆ ಅಡ್ಡಬಿದ್ದನು.
39ಆಗ ಯೇಸುವು, “ನಾನು ನ್ಯಾಯತೀರ್ಪಿಗಾಗಿ ಈ ಲೋಕಕ್ಕೆ ಬಂದಿದ್ದೇನೆ. ಆ ತೀರ್ಪು ಏನೆಂದರೆ ಕುರುಡರು ನೋಡುವರು, ದೃಷ್ಟಿ ಇರುವವರು ಕುರುಡರಾಗುವರು” ಎಂದನು. 40ಇದನ್ನು ಆತನೊಂದಿಗಿದ್ದ ಫರಿಸಾಯರಲ್ಲಿ ಕೆಲವರು ಕೇಳಿ, “ನಾವು ಸಹ ಕುರುಡರೇನು?” ಎಂದು ಕೇಳಿದಾಗ, 41ಯೇಸು ಅವರಿಗೆ, “ನೀವು ಕುರುಡರಾಗಿದ್ದರೆ ನಿಮಗೆ ಪಾಪವು ಇರುತ್ತಿರಲಿಲ್ಲ. ಆದರೆ ‘ನಿಮಗೆ ಕಣ್ಣುಕಾಣುತ್ತವೆ’ ಎಂದು ನೀವು ಹೇಳುವುದರಿಂದ ನಿಮ್ಮ ಪಾಪ ನಿಮಗೆ ಉಳಿದಿದೆ” ಎಂದನು.

Currently Selected:

ಯೋಹಾ 9: IRVKan

Highlight

Share

Copy

None

Want to have your highlights saved across all your devices? Sign up or sign in

YouVersion uses cookies to personalize your experience. By using our website, you accept our use of cookies as described in our Privacy Policy