YouVersion Logo
Search Icon

ಯೆಹೆ 1

1
ವಾಹನರೂಢನಾದ ಯೆಹೋವನ ದರ್ಶನ
1ಕೆಬಾರ್ ನದಿಯ ಹತ್ತಿರ ಸೆರೆಯಾಗಿ ವಾಸಿಸುತ್ತಿದ್ದ ಯೆಹೂದ್ಯರ ಮಧ್ಯದಲ್ಲಿ ನಾನು ವಾಸಿಸುತ್ತಿದ್ದಾಗ, ಮೂವತ್ತನೆಯ ವರ್ಷದ, ನಾಲ್ಕನೆಯ ತಿಂಗಳಿನ ಐದನೆಯ ದಿನದಲ್ಲಿ ಆಕಾಶವು ತೆರೆಯಲ್ಪಟ್ಟಿತು, ನಾನು ದೇವ ದರ್ಶನಗಳನ್ನು ಕಂಡೆನು.
2ಅರಸನಾದ ಯೆಹೋಯಾಖೀನನು ಸೆರೆಯಾದ ಐದನೆಯ ವರ್ಷದ ನಾಲ್ಕನೆಯ ತಿಂಗಳಿನ ಐದನೆಯ ದಿನದಲ್ಲಿ, 3ಯೆಹೋವನ ವಾಕ್ಯವು ಕಸ್ದೀಯ ದೇಶದೊಳಗೆ ಕೆಬಾರ್ ನದಿಯ ಹತ್ತಿರ ಬೂಜಿಯ ಮಗನೂ, ಯಾಜಕನೂ ಆದ ಯೆಹೆಜ್ಕೇಲನಿಗೆ ಸ್ಪಷ್ಟವಾಗಿ ಕೇಳಿಸಿತು; ಅಲ್ಲಿ ಯೆಹೋವನ ಹಸ್ತಸ್ಪರ್ಶದಿಂದ ಅವನು ಪರವಶನಾದನು.
4ಆಗ ನಾನು ನೋಡಲಾಗಿ; ಇಗೋ, ಉತ್ತರ ದಿಕ್ಕಿನಿಂದ ಬಿರುಗಾಳಿಯು ಬೀಸಿತು, ಎಡೆಬಿಡದೆ ಝಗಝಗಿಸುವ ಜ್ವಾಲೆಯುಳ್ಳ ಮಹಾಮೇಘವು ಕಾಣಿಸಿತು. ಅದರ ಸುತ್ತಲೂ ಮಿಂಚು ಹೊಳೆಯಿತು, ಅದರ ನಡುವೆ, ಆ ಜ್ವಾಲೆಯ ಮಧ್ಯೆ, ಸುವರ್ಣದಂಥ ಕಾಂತಿಯು ಉಂಟಾಯಿತು. 5ಅದರ ಮಧ್ಯದೊಳಗಿಂದ ನಾಲ್ಕು ಜೀವಿಗಳ ಆಕಾರಗಳು ಕಂಡುಬಂದವು; ಅವುಗಳ ರೂಪವು ಮನುಷ್ಯನ ರೂಪದಂತಿತ್ತು. 6ಒಂದೊಂದಕ್ಕೆ ನಾಲ್ಕು ನಾಲ್ಕು ಮುಖಗಳೂ ಮತ್ತು ನಾಲ್ಕು ನಾಲ್ಕು ರೆಕ್ಕೆಗಳೂ ಇದ್ದವು. 7ಅವುಗಳ ಕಾಲುಗಳು ನೆಟ್ಟಗಿದ್ದು; ಹೆಜ್ಜೆಗಳು ಕರುವಿನ ಗೊರಸಿನಂತಿದ್ದವು. ಅವುಗಳು ಬೆಳಗಿದ ತಾಮ್ರದ ಹಾಗೆ ಹೊಳೆಯುತ್ತಿದ್ದವು. 8ಒಂದೊಂದು ಜೀವಿಯ ನಾಲ್ಕು ಪಾರ್ಶ್ವಗಳಲ್ಲಿನ ರೆಕ್ಕೆಗಳ ಕೆಳಗೆ ಮನುಷ್ಯನ ಹಸ್ತದಂಥ ಹಸ್ತಗಳಿದ್ದವು; ಆ ನಾಲ್ಕು ಜೀವಿಗಳ ಮುಖಗಳೂ, ರೆಕ್ಕೆಗಳೂ ಹೇಗಿದ್ದವೆಂದರೆ, 9ರೆಕ್ಕೆಗಳು ಒಂದಕ್ಕೊಂದು ತಗಲುತ್ತಿದ್ದವು; ಆ ಜೀವಿಗಳು ಮುಂದೆ ಹೋಗುವಾಗ ತಿರುಗಿಕೊಳ್ಳದೆ ನೇರ ಮುಖವಾಗಿಯೇ ಹೋಗುತ್ತಿದ್ದವು.
10ಅವುಗಳ ಮುಖಗಳು ಹೀಗಿದ್ದವು: ಒಂದೊಂದರ ಮುಂದಿನ ಮುಖವು ಮನುಷ್ಯನ ಮುಖದಂತಿತ್ತು, ಬಲಗಡೆಯ ಮುಖವು ಸಿಂಹದ ಮುಖದಂತಿತ್ತು, ಎಡಗಡೆಯ ಮುಖವು ಹೋರಿಯ ಮುಖದಂತಿತ್ತು, ಹಿಂದಿನ ಮುಖವು ಗರುಡಪಕ್ಷಿಯ ಮುಖದಂತಿತ್ತು. 11ಅವುಗಳ ರೆಕ್ಕೆಗಳು ಮೇಲಕ್ಕೆ ಚಾಚಲ್ಪಟ್ಟಿದ್ದವು; ರೆಕ್ಕೆಗಳೂ ಮೇಲ್ಗಡೆ ಪ್ರತ್ಯೇಕಪ್ರತ್ಯೇಕವಾಗಿದ್ದವು; ಒಂದೊಂದು ಜೀವಿಯ ಎರಡು ರೆಕ್ಕೆಗಳು ಪಕ್ಕದ ಜೀವಿಗಳ ರೆಕ್ಕೆಗಳಿಗೆ ತಗಲುತ್ತಿದ್ದವು, ಇನ್ನೆರಡು ರೆಕ್ಕೆಗಳು ದೇಹವನ್ನು ಮುಚ್ಚಿಕೊಂಡಿದ್ದವು. 12ಆ ಜೀವಿಗಳೆಲ್ಲಾ ನೇರ ಮುಖವಾಗಿಯೇ ಹೋಗುತ್ತಿದ್ದವು, ದೇವರಾತ್ಮವು ಸಾಗಿಸಿದ ಕಡೆಗೇ ಸಾಗಿದವು; ಹಿಂತಿರುಗಿನೋಡದೆ ಮುಂದೆ ಹೋದವು. 13ಆ ಜೀವಿಗಳ ಮಧ್ಯದಲ್ಲಿ ಅದ್ಭುತಕಾಂತಿಯೊಂದು ಉರಿಯುವ ಕೆಂಡಗಳೋ, ಪಂಜುಗಳೋ ಎಂಬಂತೆ ಕಾಣಿಸಿತು; ಅದು ಜೀವಿಗಳ ನಡುವೆ ಓಲಾಡುತ್ತಿತ್ತು; ಆ ಉರಿಯು ತೇಜೋಮಯವಾಗಿತ್ತು, ಅದರೊಳಗಿಂದ ಮಿಂಚುಗಳು ಹೊರಡುತ್ತಿದ್ದವು. 14ಆ ಜೀವಿಗಳು ಮಿಂಚಿನಂತೆ ಮುಂದಕ್ಕೂ, ಹಿಂದಕ್ಕೂ ವೇಗವಾಗಿ ಚಲಿಸುತ್ತಿದ್ದವು.
15ಇಗೋ, ನಾನು ಆ ಜೀವಿಗಳನ್ನು ನೋಡುತ್ತಿರಲಾಗಿ ಒಂದೊಂದು ಕಡೆಯಲ್ಲಿಯೂ ಜೀವಿಗಳ ಪಕ್ಕದಲ್ಲಿ ಭೂಮಿಯ ಮೇಲೆ ಒಂದು ಚಕ್ರವು ಕಾಣಿಸಿತು. 16ಆ ಚಕ್ರಗಳ ವರ್ಣವೂ, ರಚನೆಯೂ ಹೇಗಿದ್ದವೆಂದರೆ, ಅವುಗಳ ವರ್ಣವು ಪೀತರತ್ನದ ಹಾಗೆ ಥಳಥಳಿಸುತ್ತಿತ್ತು. ಒಂದು ಚಕ್ರದೊಳಗೆ ಇನ್ನೊಂದು ಚಕ್ರವು ಅಡ್ಡವಾಗಿ ರಚಿಸಿದಂತಿತ್ತು; ಆ ನಾಲ್ಕು ಚಕ್ರಗಳು ಒಂದೇ ಮಾದರಿಯಾಗಿದ್ದವು. 17ಅವು ಚಲಿಸುವಾಗ ನಾಲ್ಕು ಕಡೆಗಳಲ್ಲಿ ಯಾವ ಕಡೆಗಾದರೂ ತಿರುಗುತ್ತಿದ್ದವು; ಓರೆಯಾಗಿ ತಿರುಗುತ್ತಿರಲಿಲ್ಲ.
18ಗಾಲಿಗಳ ಸುತ್ತಣ ಭಾಗಗಳು ಎತ್ತರವಾಗಿಯೂ, ಭಯಂಕರವಾಗಿಯೂ ಇದ್ದವು; ಈ ಭಾಗಗಳ ಎಲ್ಲಾ ಕಡೆಯಲ್ಲಿಯೂ ತುಂಬಾ ಕಣ್ಣುಗಳಿದ್ದವು; 19ಜೀವಿಗಳು ಮುಂದೆ ಹೋಗುವಾಗ ಚಕ್ರಗಳೂ ಅವುಗಳ ಪಕ್ಕದಲ್ಲಿ ಮುಂದೆ ಹೋಗುತ್ತಿದ್ದವು; ಆ ಜೀವಿಗಳು ಭೂಮಿಯಿಂದ ಮೇಲಕ್ಕೇಳುವಾಗ ಚಕ್ರಗಳೂ ಮೇಲೆ ಏಳುತ್ತಿದ್ದವು; 20ದೇವರಾತ್ಮವು ಸಾಗಿಸಿದ ಕಡೆಗೇ ಸಾಗಿದವು; ಜೀವಿಗಳ ಒಳಗಿನ ಆತ್ಮವು ಚಕ್ರಗಳಲ್ಲಿ ಇದ್ದ ಕಾರಣ ಚಕ್ರಗಳು ಅವುಗಳ ಪಕ್ಕದಲ್ಲಿ ಏಳುತ್ತಿದ್ದವು. 21ಅವು ಮುಂದೆ ಹೋಗುವಾಗ ಇವೂ ಮುಂದೆ ಹೋಗುತ್ತಿದ್ದವು, ಅವು ನಿಂತು ಹೋಗುವಾಗ ಇವೂ ನಿಂತುಹೋಗುತ್ತಿದ್ದವು, ಅವು ನೆಲದಿಂದ ಮೇಲಕ್ಕೆ ಏಳುವಾಗ ಚಕ್ರಗಳೂ ಅವುಗಳ ಪಕ್ಕದಲ್ಲಿ ಏಳುತ್ತಿದ್ದವು; ಏಕೆಂದರೆ ಜೀವಿಗಳ ಆತ್ಮವು ಚಕ್ರಗಳಲ್ಲಿಯೂ ಇತ್ತು.
22ಭೀಕರವಾದ ಮಂಜುಗಡ್ಡೆಯಂತೆ ಥಳಥಳಿಸುವ ಒಂದು ರೀತಿಯ ಗಗನಮಂಡಲ ಆ ಜೀವಿಗಳ ತಲೆಯ ಮೇಲ್ಗಡೆ ಹರಡಿತ್ತು. 23ಅದರ ಕೆಳಗೆ ಜೀವಿಗಳ ರೆಕ್ಕೆಗಳು ನೇರವಾಗಿ ಚಾಚಲ್ಪಟ್ಟು ಒಂದಕ್ಕೊಂದು ತಗಲುತ್ತಿದ್ದವು; ಇದಲ್ಲದೆ ಒಂದೊಂದು ಜೀವಿಗೆ ದೇಹವನ್ನು ಮುಚ್ಚಿಕೊಳ್ಳುವ ಎರಡೆರಡು ರೆಕ್ಕೆಗಳಿದ್ದವು. 24ಅವು ಮುಂದೆ ಹೋಗುವಾಗ ಅವುಗಳ ರೆಕ್ಕೆಗಳ ಶಬ್ದವು ಜಲಪ್ರವಾಹದ ಘೋಷದಂತೆ ಸರ್ವಶಕ್ತನ ಧ್ವನಿಯಂತೆ, ಆರ್ಭಟಿಸುವ ಸೈನ್ಯದ ಕೋಲಾಹಲದಂತೆ ನನಗೆ ಕೇಳಿಸಿತು; ಅವು ನಿಂತಾಗ ರೆಕ್ಕೆಗಳನ್ನು ಮುದುರಿಕೊಳ್ಳುತ್ತಿದ್ದವು.
25ಅವುಗಳ ತಲೆಗಳ ಮೇಲ್ಗಡೆಯ ಗಗನಮಂಡಲದ ಮೇಲಿಂದ ಒಂದು ಧ್ವನಿಯು ಕಿವಿಗೆ ಬಿತ್ತು. ಜೀವಿಗಳು ನಿಂತಾಗ ರೆಕ್ಕೆಗಳನ್ನು ಮುದುರಿಕೊಳ್ಳುತ್ತಿದ್ದವು. 26ಅವುಗಳ ತಲೆಗಳ ಮೇಲ್ಗಡೆಯ ಗಗನಮಂಡಲ ಮೇಲೆ ಇಂದ್ರನೀಲಮಣಿಯಂತೆ ಹೊಳೆಯುವ ಸಿಂಹಾಸನಾಕಾರವು ಕಾಣಿಸಿತು; ಅದರ ಮೇಲೆ ನರರೂಪದಂಥ ರೂಪವುಳ್ಳ ಒಬ್ಬಾತನು ಆಸೀನನಾಗಿದ್ದನು.
27ಸೊಂಟದ ಹಾಗೆ ತೋರುವ ಆತನ ಮಧ್ಯಭಾಗದಿಂದ ಮೇಲ್ಗಡೆ ಸುವರ್ಣವು ಥಳಥಳಿಸುತ್ತದೋ, ಬೆಂಕಿಯು ಆ ರೂಪದೊಳಗೆಲ್ಲಾ ಪ್ರಜ್ವಲಿಸುತ್ತದೋ ಎಂಬಂತಿರುವ ಅದ್ಭುತಕಾಂತಿಯನ್ನು ಕಂಡೆನು; ಸೊಂಟದ ಹಾಗೆ ತೋರುವ ಆತನ ಮಧ್ಯಭಾಗದಿಂದ ಕೆಳಗಡೆ ಬೆಂಕಿಯು ಉರಿಯುತ್ತದೋ ಎಂಬಂತಿರುವ ಮಹಾ ತೇಜಸ್ಸನ್ನು ನೋಡಿದೆನು; ಮತ್ತು ಪ್ರಕಾಶವು ಆತನನ್ನು ಆವರಿಸಿಕೊಂಡಿತ್ತು.
28ಮಳೆಗಾಲದಲ್ಲಿ ಮೇಘಮಂಡಲದೊಳಗೆ ಕಾಮನ ಬಿಲ್ಲು ಹೊಳೆಯುವಂತೆ ಆತನ ಸುತ್ತಲೂ ಪ್ರಕಾಶವು ಹೊಳೆಯುತ್ತಿತ್ತು. ಹೀಗೆ ಯೆಹೋವನ ಮಹಿಮಾದ್ಭುತ ದರ್ಶನವು ಆಯಿತು. ಇದನ್ನು ಕಂಡಾಗ ನಾನು ಅಡ್ಡಬಿದ್ದೆ; ಮಾತನಾಡುವಾತನ ವಾಣಿಯನ್ನು ಕೇಳಿದೆ.

Currently Selected:

ಯೆಹೆ 1: IRVKan

Highlight

Share

Copy

None

Want to have your highlights saved across all your devices? Sign up or sign in

YouVersion uses cookies to personalize your experience. By using our website, you accept our use of cookies as described in our Privacy Policy