YouVersion Logo
Search Icon

ದಾನಿ 1

1
ನೆಬೂಕದ್ನೆಚರನ ಆಸ್ಥಾನದಲ್ಲಿ ಇಬ್ರಿಯ ಯುವಕರು
1ಯೆಹೂದದ ಅರಸನಾದ ಯೆಹೋಯಾಕೀಮನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ಬಾಬೆಲಿನ ರಾಜನಾದ ನೆಬೂಕದ್ನೆಚ್ಚರನು ಯೆರೂಸಲೇಮಿಗೆ ಬಂದು ಮುತ್ತಿಗೆ ಹಾಕಿದನು. 2ಆಗ ಕರ್ತನು ಯೆಹೂದದ ಅರಸನಾದ ಯೆಹೋಯಾಕೀಮನನ್ನೂ, ದೇವಾಲಯದ ಅನೇಕ ಪಾತ್ರೆಗಳನ್ನೂ ಅವನ ವಶಕ್ಕೆ ಕೊಡಲು ಅವನು ಅವುಗಳನ್ನು ಶಿನಾರ್ ದೇಶಕ್ಕೆ ಸಾಗಿಸಿ ತನ್ನ ದೇವರ ಮಂದಿರಕ್ಕೆ ತಂದು ಆ ದೇವರ ಭಂಡಾರದಲ್ಲಿ ಸೇರಿಸಿಬಿಟ್ಟನು.
3ಅನಂತರ ಆ ರಾಜನು ತನ್ನ ಕಂಚುಕಿಯರಲ್ಲಿ ಮುಖ್ಯಸ್ಥನಾದ ಅಶ್ಪೆನಜನಿಗೆ, “ನೀನು ಇಸ್ರಾಯೇಲರಲ್ಲಿ ಅಂದರೆ ರಾಜವಂಶೀಯರಲ್ಲಿ 4ಮತ್ತು ಪ್ರಧಾನರಲ್ಲಿ ಅಂಗದೋಷವಿಲ್ಲದವರೂ, ಸುಂದರರೂ, ಸಮಸ್ತ ಶಾಸ್ತ್ರಜ್ಞರೂ, ಪಂಡಿತರೂ, ವಿದ್ಯಾನಿಪುಣರೂ, ರಾಜಾಲಯದಲ್ಲಿ ಸನ್ನಿಧಿ ಸೇವೆಮಾಡಲು ಸಮರ್ಥರೂ ಆದ ಕೆಲವು ಯುವಕರನ್ನು ಇಲ್ಲಿಗೆ ಕರೆದುತಂದು ಅವರಿಗೆ ಕಸ್ದೀಯ ಪಂಡಿತರ ಭಾಷೆಯನ್ನೂ, ಶಾಸ್ತ್ರಗಳನ್ನೂ ಕಲಿಸಬೇಕು” ಎಂಬುದಾಗಿ ಅಪ್ಪಣೆಕೊಟ್ಟನು. 5ಇದಲ್ಲದೆ, “ಇನ್ನು ಮುಂದೆ ಅವರು ಸನ್ನಿಧಿಸೇವಕರಾಗಲೆಂದು ತನ್ನ ಭೋಜನ ಪದಾರ್ಥಗಳನ್ನೂ, ರಾಜನು ಕುಡಿಯುವ ದ್ರಾಕ್ಷಾರಸವನ್ನೂ ಅವರಿಗೆ ಪ್ರತಿದಿನ ಬಡಿಸುವ ಏರ್ಪಾಡುಮಾಡಿ ಅವರನ್ನು ಮೂರು ವರ್ಷ ಪೋಷಿಸಬೇಕು” ಎಂದು ಆಜ್ಞಾಪಿಸಿದನು.
6ಆರಿಸಲ್ಪಟ್ಟ ಯುವಕರಲ್ಲಿ ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯ ಎಂಬ ಯೆಹೂದ್ಯರು ಸೇರಿದ್ದರು. 7ಕಂಚುಕಿಯರ ಅಧ್ಯಕ್ಷನು ಇವರಿಗೆ ನಾಮಕರಣಮಾಡಿ ದಾನಿಯೇಲನಿಗೆ ಬೇಲ್ತೆಶಚ್ಚರ್, ಹನನ್ಯನಿಗೆ ಶದ್ರಕ್, ಮೀಶಾಯೇಲನಿಗೆ ಮೇಶಕ್, ಅಜರ್ಯನಿಗೆ ಅಬೇದ್ನೆಗೋ ಎಂಬ ಹೆಸರಿಟ್ಟನು.
8ಆದರೆ ದಾನಿಯೇಲನು ರಾಜನ ಭೋಜನ ಪದಾರ್ಥಗಳನ್ನು ತಿಂದು ರಾಜನು ಕುಡಿಯುವ ದ್ರಾಕ್ಷಾರಸವನ್ನು ಕುಡಿದು ತನ್ನನ್ನು ಅಶುದ್ಧ ಮಾಡಿಕೊಳ್ಳಬಾರದೆಂದು ನಿಶ್ಚಯಿಸಿ ಕಂಚುಕಿಯರ ಅಧ್ಯಕ್ಷನಿಗೆ, “ನಾನು ಅಶುದ್ಧನಾಗಲಾರೆ, ಕ್ಷಮಿಸು” ಎಂದು ವಿಜ್ಞಾಪಿಸಿದನು. 9ದೇವರು ಕಂಚುಕಿಯರ ಅಧ್ಯಕ್ಷನ ಮನಸ್ಸಿನಲ್ಲಿ ದಾನಿಯೇಲನ ಮೇಲೆ ಕನಿಕರವನ್ನೂ, ದಯೆಯನ್ನೂ ಹುಟ್ಟಿಸಿದನು. 10ಆ ವಿಜ್ಞಾಪನೆಯನ್ನು ಕೇಳಿ ಕಂಚುಕಿಯರ ಅಧ್ಯಕ್ಷನು ದಾನಿಯೇಲನಿಗೆ, “ನಿಮಗೆ ಆಹಾರ ಮತ್ತು ಪಾನಗಳನ್ನು ಏರ್ಪಡಿಸಿದ್ದ ನನ್ನ ಒಡೆಯನಾದ ರಾಜನು ನಿಮ್ಮಂತೆ ಆರಿಸಲ್ಪಟ್ಟ ಯುವಕರ ಮುಖಕ್ಕಿಂತ ನಿಮ್ಮ ಮುಖವು ಬಾಡಿರುವುದನ್ನು ನೋಡಿ, ರಾಜನು ನನ್ನ ತಲೆಯನ್ನು ತೆಗೆಯಿಸಲು ನೀವು ಕಾರಣರಾಗುವಿರಿ” ಎಂದು ಭಯ ವ್ಯಕ್ತಪಡಿಸಿದನು.
11ದಾನಿಯೇಲನು ತನ್ನನ್ನೂ, ಹನನ್ಯ, ಮೀಶಾಯೇಲ, ಅಜರ್ಯ, ಇವರನ್ನೂ ನೋಡಿಕೊಳ್ಳುವುದಕ್ಕೆ ಕಂಚುಕಿಯರ ಅಧ್ಯಕ್ಷನು 12ನೇಮಿಸಿದ್ದ ವಿಚಾರಕನಿಗೆ, “ಅಯ್ಯಾ, ಹತ್ತು ದಿನಗಳ ಮಟ್ಟಿಗೆ ನಿನ್ನ ಸೇವಕರಾದ ನಮ್ಮನ್ನು ಪರೀಕ್ಷಿಸು; ಆಹಾರಕ್ಕೆ ಕಾಯಿಪಲ್ಯ ಮತ್ತು ಪಾನಕ್ಕೆ ನೀರು ನಮಗೆ ಒದಗಲಿ. 13ಆ ಮೇಲೆ ನಮ್ಮ ಮುಖಗಳನ್ನೂ ರಾಜನ ಆಹಾರವನ್ನು ಉಣ್ಣುವ ಯುವಕರ ಮುಖಗಳನ್ನೂ, ಹೋಲಿಸಿನೋಡು; ನೋಡಿದ್ದಕ್ಕೆ ತಕ್ಕ ಹಾಗೆ ನಿನ್ನ ಸೇವಕರನ್ನು ನಡೆಸು” ಎಂದು ಬಿನ್ನವಿಸಿದನು.
14ಅವನು ಅವರ ಬಿನ್ನಹಕ್ಕೆ ಒಪ್ಪಿ ಹತ್ತು ದಿನ ಪರೀಕ್ಷಿಸಿದನು. 15ಅವರು ಹತ್ತು ದಿನಗಳ ನಂತರ ರಾಜನ ಆಹಾರವನ್ನು ಉಣ್ಣುತ್ತಿದ್ದ ಸಕಲ ಯುವಕರಿಗಿಂತ ಸುಂದರರಾಗಿಯೂ, ಪುಷ್ಟರಾಗಿಯೂ ಕಾಣಿಸಿದರು. 16ಅಂದಿನಿಂದ ವಿಚಾರಕನು ಅವರಿಗೆ ನೇಮಕವಾದ ಭೋಜನ ಪದಾರ್ಥಗಳನ್ನೂ, ಅವರು ಕುಡಿಯಬೇಕಾದ ದ್ರಾಕ್ಷಾರಸವನ್ನೂ ತೆಗೆದಿಟ್ಟು ಕಾಯಿಪಲ್ಯಗಳನ್ನು ಕೊಡುತ್ತಾ ಬಂದನು.
17ಹೀಗಿರಲು ದೇವರು ಆ ನಾಲ್ಕು ಮಂದಿ ಯುವಕರಿಗೆ ಸಕಲ ಶಾಸ್ತ್ರಗಳಲ್ಲಿಯೂ, ವಿದ್ಯೆಗಳಲ್ಲಿಯೂ, ಜ್ಞಾನವಿವೇಕಗಳನ್ನು ದಯಪಾಲಿಸಿದನು. ದಾನಿಯೇಲನು ಸಮಸ್ತ ಸ್ವಪ್ನಗಳನ್ನೂ, ದಿವ್ಯದರ್ಶನಗಳನ್ನೂ ಗ್ರಹಿಸುವುದರಲ್ಲಿ ಪ್ರವೀಣನಾದನು. 18ರಾಜನು ನೇಮಿಸಿದ ಕಾಲವು ಕಳೆದು ಯುವಕರನ್ನು ಸನ್ನಿಧಿಗೆ ತರತಕ್ಕ ಸಮಯವು ಬಂದಾಗ, ಕಂಚುಕಿಯರ ಅಧ್ಯಕ್ಷನು ಅವರನ್ನು ನೆಬೂಕದ್ನೆಚ್ಚರನ ಸಮ್ಮುಖಕ್ಕೆ ಕರೆದು ತಂದನು.
19ರಾಜನು ಅವರ ಸಂಗಡ ಮಾತನಾಡುವಾಗ ಆ ಸಮಸ್ತ ಯುವಕರಲ್ಲಿ ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯ ಇವರ ಹಾಗೆ ಯಾರೂ ಕಂಡುಬರಲಿಲ್ಲ; ಆದಕಾರಣ ಅವರು ರಾಜನ ಸನ್ನಿಧಿಸೇವಕರಾದರು. 20ಬಳಿಕ ರಾಜನು ಶಾಸ್ತ್ರೀಯ ವಿದ್ಯೆಯ ಸರ್ವವಿಷಯಗಳಲ್ಲಿ ಅವರನ್ನು ವಿಚಾರಮಾಡಲು ಅವನ ಪೂರ್ಣ ರಾಜ್ಯದಲ್ಲಿನ ಎಲ್ಲಾ ಜೋಯಿಸರಿಗಿಂತಲೂ, ಮಂತ್ರವಾದಿಗಳಿಗಿಂತಲೂ ಹತ್ತರಷ್ಟು ನಿಪುಣರಾಗಿ ಕಂಡುಬಂದರು. 21ದಾನಿಯೇಲನು ರಾಜನಾದ ಕೋರೆಷನ ಆಳ್ವಿಕೆಯ ಮೊದಲನೆಯ ವರ್ಷದ ತನಕ ಸನ್ನಿಧಿ ಸೇವಕನಾಗಿಯೇ ಇದ್ದನು.

Currently Selected:

ದಾನಿ 1: IRVKan

Highlight

Share

Copy

None

Want to have your highlights saved across all your devices? Sign up or sign in

YouVersion uses cookies to personalize your experience. By using our website, you accept our use of cookies as described in our Privacy Policy