YouVersion Logo
Search Icon

ಯೋಹಾನ 18

18
ಇಸ್ಕರಿಯೋತ ಯೂದನು ಯೇಸುವನ್ನು ವೈರಿಗಳಿಗೆ ಹಿಡುಕೊಟ್ಟದ್ದು
(ಮತ್ತಾ. 26.47-56; ಮಾರ್ಕ. 14.43-50; ಲೂಕ. 22.47-53)
1ಯೇಸು ಇದನ್ನು ಹೇಳಿದ ಮೇಲೆ ತನ್ನ ಶಿಷ್ಯರ ಸಂಗಡ ಕೆದ್ರೋನ್ ಹಳ್ಳದ ಆಚೆಗೆ ಹೊರಟುಹೋದನು. ಅಲ್ಲಿ ಒಂದು ತೋಟವಿತ್ತು; ಅದರೊಳಕ್ಕೆ ಆತನೂ ಆತನ ಶಿಷ್ಯರೂ ಹೋದರು. 2ಯೇಸುವೂ ಆತನ ಶಿಷ್ಯರೂ ಆಗಾಗ್ಗೆ ಅಲ್ಲಿ ಕೂಡುತ್ತಾ ಇದ್ದದರಿಂದ ಆತನನ್ನು ಹಿಡುಕೊಟ್ಟ ಯೂದನಿಗೂ ಆ ಸ್ಥಳವು ಗೊತ್ತಾಗಿತ್ತು. 3ಹೀಗಿರಲಾಗಿ ಯೂದನು ಸಿಪಾಯಿಗಳ ಪಟಾಲಮನ್ನೂ ಮಹಾಯಾಜಕರು ಮತ್ತು ಫರಿಸಾಯರು ಕೊಟ್ಟ ಓಲೇಕಾರರನ್ನೂ ಕರಕೊಂಡು ದೀವಿಟಿಗಳನ್ನೂ ಪಂಜುಗಳನ್ನೂ ಆಯುಧಗಳನ್ನೂ ಹಿಡಿಸಿಕೊಂಡು ಅಲ್ಲಿಗೆ ಬಂದನು. 4ಆಗ ಯೇಸು ತನ್ನ ಮೇಲೆ ಬರುವದನ್ನೆಲ್ಲಾ ತಿಳಿದು ಹೊರಗೆ ಹೋಗಿ - ನೀವು ಯಾರನ್ನು ಹುಡುಕುತ್ತೀರಿ ಎಂದು ಅವರನ್ನು ಕೇಳಿದನು. 5ಅದಕ್ಕೆ ಅವರು - ನಜರೇತಿನ ಯೇಸುವನ್ನು ಹುಡುಕುತ್ತೇವೆ ಅನ್ನಲು ಯೇಸು ಅವರಿಗೆ - ನಾನೇ ಅವನು ಎಂದು ಹೇಳಿದನು. ಆತನನ್ನು ಹಿಡುಕೊಡುವ ಯೂದನು ಸಹ ಅವರ ಸಂಗಡ ನಿಂತಿದ್ದನು. 6ಆತನು ಅವರಿಗೆ - ನಾನೇ ಅವನು ಎಂದು ಹೇಳಿದಾಗ ಅವರು ಹಿಂದಕ್ಕೆ ಸರಿದು ನೆಲದ ಮೇಲೆ ಬಿದ್ದರು. 7ಆತನು - ಯಾರನ್ನು ಹುಡುಕುತ್ತೀರೆಂದು ತಿರಿಗಿ ಅವರನ್ನು ಕೇಳಲು ಅವರು - ನಜರೇತಿನ ಯೇಸುವನ್ನು ಹುಡುಕುತ್ತೇವೆ ಅಂದರು. 8ಅದಕ್ಕೆ ಯೇಸು - ನಾನೇ ಅವನೆಂದು ನಿಮಗೆ ಹೇಳಿದೆನಲ್ಲಾ; ನೀವು ನನ್ನನ್ನೇ ಹುಡುಕುವವರಾದರೆ ಇವರು ಹೋಗಬಿಡಿರಿ ಅಂದನು. 9ನೀನು ನನಗೆ ಕೊಟ್ಟವರಲ್ಲಿ ಒಬ್ಬನನ್ನಾದರೂ ನಾನು ಕಳಕೊಳ್ಳಲಿಲ್ಲವೆಂದು ಆತನು ಹೇಳಿದ ಮಾತು ಹೀಗೆ ನೆರವೇರಿತು. 10ಸೀಮೋನ ಪೇತ್ರನಲ್ಲಿ ಒಂದು ಕತ್ತಿ ಇತ್ತು; ಅದನ್ನು ಅವನು ಹಿರಿದು ಮಹಾಯಾಜಕನ ಆಳನ್ನು ಹೊಡೆದು ಅವನ ಬಲಗಿವಿಯನ್ನು ಕತ್ತರಿಸಿದನು. ಆ ಆಳಿನ ಹೆಸರು ಮಲ್ಕನು. 11ಆಗ ಯೇಸು ಪೇತ್ರನಿಗೆ - ಕತ್ತಿಯನ್ನು ಒರೆಯಲ್ಲಿ ಹಾಕು; ತಂದೆ ನನಗೆ ಕೊಟ್ಟಿರುವ ಪಾತ್ರೆಯಲ್ಲಿ ನಾನು ಕುಡಿಯಬಾರದೋ ಎಂದು ಹೇಳಿದನು.
ಮಹಾಯಾಜಕನು ಯೇಸುವನ್ನು ವಿಚಾರಿಸಿದ್ದು; ಪೇತ್ರನು ಆತನನ್ನು ನಾನರಿಯೆನೆಂದು ಸುಳ್ಳು ಹೇಳಿದ್ದು
(ಮತ್ತಾ. 26.69-75; ಮಾರ್ಕ. 14.66-72; ಲೂಕ. 22.54-62)
12ಆಮೇಲೆ ಆ ಸಿಪಾಯಿಗಳೂ ಸಹಸ್ರಾಧಿಪತಿಯೂ ಯೆಹೂದ್ಯರ ಓಲೇಕಾರರೂ ಯೇಸುವನ್ನು ಹಿಡುಕೊಂಡು ಕಟ್ಟಿ ಮೊದಲು ಅನ್ನನ ಬಳಿಗೆ ಕರಕೊಂಡು ಹೋದರು. 13ಇವನು ಆ ವರುಷದಲ್ಲಿ ಮಹಾಯಾಜಕನಾಗಿದ್ದ ಕಾಯಫನ ಮಾವನಾಗಿದ್ದನು. 14ಆ ಕಾಯಫನೇ - ಒಬ್ಬ ಮನುಷ್ಯನು ಜನಕ್ಕೋಸ್ಕರ ಸಾಯುವದು ಹಿತಕರವೆಂದು ಯೆಹೂದ್ಯರಿಗೆ ಆಲೋಚನೆ ಕೊಟ್ಟವನು.
15ಸೀಮೋನ ಪೇತ್ರನೂ ಮತ್ತೊಬ್ಬ ಶಿಷ್ಯನೂ ಯೇಸುವಿನ ಹಿಂದೆ ಹೋದರು. ಆ ಶಿಷ್ಯನಿಗೆ ಮಹಾಯಾಜಕನ ಪರಿಚಿತಿ ಇದ್ದದರಿಂದ ಯೇಸುವಿನ ಕೂಡ ಮಹಾಯಾಜಕನ ಅಂಗಳದೊಳಕ್ಕೆ ಹೋದನು; 16ಪೇತ್ರನು ಹೊರಗೆ ಬಾಗಲ ಹತ್ತರ ನಿಂತಿದ್ದರಿಂದ ಮಹಾಯಾಜಕನ ಪರಿಚಿತನಾದ ಆ ಶಿಷ್ಯನು ಹೊರಗೆ ಬಂದು ಬಾಗಲು ಕಾಯುವವಳ ಸಂಗಡ ಮಾತಾಡಿ ಪೇತ್ರನನ್ನು ಒಳಕ್ಕೆ ಕರಕೊಂಡು ಹೋದನು. 17ಆಗ ಬಾಗಲು ಕಾಯುವ ದಾಸಿಯು - ನೀನು ಸಹ ಈ ಮನುಷ್ಯನ ಶಿಷ್ಯರಲ್ಲಿ ಒಬ್ಬನೇನು? ಎಂದು ಪೇತ್ರನನ್ನು ಕೇಳಲು ಅವನು - ಅಲ್ಲ ಅಂದನು. 18ಆಗ ಚಳಿಯಾಗಿದ್ದದರಿಂದ ಆಳುಗಳೂ ಓಲೇಕಾರರೂ ಇದ್ದಲಿನ ಬೆಂಕಿಮಾಡಿ ಚಳಿಕಾಯಿಸಿಕೊಳ್ಳುತ್ತಾ ನಿಂತಿರಲಾಗಿ ಪೇತ್ರನೂ ಅವರ ಸಂಗಡ ನಿಂತುಕೊಂಡು ಚಳಿಕಾಯಿಸಿಕೊಳ್ಳುತ್ತಿದ್ದನು.
19ಅಷ್ಟರೊಳಗೆ ಮಹಾಯಾಜಕನು ಯೇಸುವನ್ನು ಆತನ ಶಿಷ್ಯರ ವಿಷಯವಾಗಿಯೂ ಉಪದೇಶದ ವಿಷಯವಾಗಿಯೂ ವಿಚಾರಿಸಿದನು. 20ಅದಕ್ಕೆ ಯೇಸು - ನಾನು ಧಾರಾಳವಾಗಿ ಲೋಕದ ಮುಂದೆ ಮಾತಾಡಿದ್ದೇನೆ; ಯೆಹೂದ್ಯರೆಲ್ಲಾ ಕೂಡುವಂಥ ಸಭಾಮಂದಿರಗಳಲ್ಲಿಯೂ ದೇವಾಲಯದಲ್ಲಿಯೂ ಯಾವಾಗಲೂ ಉಪದೇಶಮಾಡುತ್ತಾ ಬಂದೆನು; ಮರೆಯಾಗಿ ಯಾವದನ್ನೂ ಮಾತಾಡಲಿಲ್ಲ. 21ನನ್ನನ್ನು ಯಾಕೆ ವಿಚಾರಿಸುತ್ತೀ? ನಾನು ಏನೇನು ಮಾತಾಡಿದೆನೋ ಅದನ್ನು ಕೇಳಿದವರಲ್ಲಿ ವಿಚಾರಿಸು; ನಾನು ಹೇಳಿದ್ದು ಇವರಿಗೆ ತಿಳಿದಿದೆಯಲ್ಲಾ ಎಂದು ಉತ್ತರಕೊಟ್ಟನು. 22ಯೇಸು ಈ ಮಾತನ್ನು ಹೇಳಿದಾಗ ಹತ್ತರ ನಿಂತಿದ್ದ ಓಲೇಕಾರರಲ್ಲಿ ಒಬ್ಬನು - ಮಹಾಯಾಜಕನಿಗೆ ಹೀಗೆ ಉತ್ತರಕೊಡುತ್ತೀಯಾ ಎಂದು ಹೇಳಿ ಆತನ ಕೆನ್ನೆಗೆ ಒಂದು ಏಟು ಹಾಕಿದನು. 23ಯೇಸು ಅವನಿಗೆ - ನಾನು ಮಾತಾಡಿದ್ದರಲ್ಲಿ ಏನಾದರೂ ದೋಷವಿದ್ದರೆ ಆ ದೋಷ ಇಂಥದೆಂದು ಸಾಕ್ಷಿ ಹೇಳು; ನಾನು ಮಾತಾಡಿದ್ದು ಸರಿಯಾಗಿದ್ದರೆ ನನ್ನನ್ನು ಯಾಕೆ ಹೊಡೆಯುತ್ತೀ ಎಂದು ಹೇಳಿದನು. 24ಆಗ ಅನ್ನನು ಆತನನ್ನು ಕಟ್ಟಿಸಿ ಮಹಾಯಾಜಕನಾದ ಕಾಯಫನ ಬಳಿಗೆ ಕಳುಹಿಸಿಕೊಟ್ಟನು.
25ಇತ್ತಲಾಗಿ ಸೀಮೋನ ಪೇತ್ರನು ನಿಂತುಕೊಂಡು ಚಳಿಕಾಸಿಕೊಳ್ಳುತ್ತಾ ಇದ್ದನು. ಆಗ ಅಲ್ಲಿದ್ದವರು ಅವನನ್ನು - ನೀನು ಅವನ ಶಿಷ್ಯರಲ್ಲಿ ಒಬ್ಬನೇನು? ಎಂದು ಕೇಳಲು ಅವನು - ಅಲ್ಲ ಅಂದನು. 26ಮಹಾಯಾಜಕನ ಆಳುಗಳಲ್ಲಿ ಪೇತ್ರನು ಕಿವಿ ಕತ್ತರಿಸಿದವನ ಬಂಧುವಾಗಿದ್ದ ಒಬ್ಬನು - ನಾನು ನಿನ್ನನ್ನು ತೋಟದಲ್ಲಿ ಅವನ ಸಂಗಡ ಕಂಡೆನಲ್ಲವೇ ಅಂದನು. 27ಅದಕ್ಕೆ ಪೇತ್ರನು ತಿರಿಗಿ ಅಲ್ಲ ಅಂದನು. ಕೂಡಲೆ ಕೋಳಿ ಕೂಗಿತು.
ಪಿಲಾತನು ಯೇಸುವನ್ನು ವಿಚಾರಿಸಿ ಆತನಿಗೆ ಮರಣವನ್ನು ವಿಧಿಸಿದ್ದು
(ಮತ್ತಾ. 27.2,11-26; ಮಾರ್ಕ. 15.1-15; ಲೂಕ. 23.1-25)
28ಆಮೇಲೆ ಅವರು ಯೇಸುವನ್ನು ಕಾಯಫನ ಬಳಿಯಿಂದ ಅರಮನೆಗೆ ಕರಕೊಂಡು ಹೋದರು. ಆಗ ಮುಂಜಾನೆ ಆಗಿತ್ತು. ಅವರು ತಮಗೆ ಮೈಲಿಗೆ ತಟ್ಟಿ ಪಸ್ಕದ ಊಟವನ್ನು ಮಾಡುವದಕ್ಕೆ ಅಡ್ಡಿಯಾದೀತೆಂದು ಅರಮನೆಯೊಳಕ್ಕೆ ಹೋಗಲಿಲ್ಲ. 29ಹೀಗಿರಲಾಗಿ ಪಿಲಾತನು ಹೊರಕ್ಕೆ ಅವರ ಬಳಿಗೆ ಬಂದು - ಈ ಮನುಷ್ಯನ ಮೇಲೆ ಏನು ದೂರು ತರುತ್ತೀರಿ ಎಂದು ಕೇಳಿದನು. 30ಅವರು ಅವನಿಗೆ - ಇವನು ದುಷ್ಕರ್ಮಿಯಲ್ಲದಿದ್ದರೆ ನಾವು ಇವನನ್ನು ನಿನಗೆ ಒಪ್ಪಿಸಿಕೊಡುತ್ತಿದ್ದಿಲ್ಲವೆಂದು ಉತ್ತರ ಕೊಟ್ಟರು. 31ಆಗ ಪಿಲಾತನು ಅವರಿಗೆ - ನೀವೇ ಅವನನ್ನು ತಕ್ಕೊಂಡುಹೋಗಿ ನಿಮ್ಮ ಧರ್ಮಶಾಸ್ತ್ರದ ಪ್ರಕಾರ ಅವನಿಗೆ ತೀರ್ಪುಮಾಡಿರಿ ಎಂದು ಹೇಳಿದನು. ಅದಕ್ಕೆ ಯೆಹೂದ್ಯರು - ಮರಣ ದಂಡನೆಯನ್ನು ವಿಧಿಸುವ ಅಧಿಕಾರವು ನಮಗಿಲ್ಲ ಅಂದರು. 32ಇದರಿಂದ ಯೇಸು ತಾನು ಎಂಥಾ ಸಾವು ಸಾಯುವೆನೆಂದು ಸೂಚಿಸಿ ಹೇಳಿದ ಮಾತು ನೆರವೇರಿತು.
33ಆಗ ಪಿಲಾತನು ತಿರಿಗಿ ಅರಮನೆಯೊಳಕ್ಕೆ ಹೋಗಿ ಯೇಸುವನ್ನು ಕರೆದು ಆತನನ್ನು - ನೀನು ಯೆಹೂದ್ಯರ ಅರಸನು ಹೌದೋ ಎಂದು ಕೇಳಿದನು. 34ಯೇಸು - ನಿನ್ನಷ್ಟಕ್ಕೆ ನೀನೇ ಇದನ್ನು ಹೇಳುತ್ತೀಯೋ? ಮತ್ತೊಬ್ಬರು ನನ್ನ ವಿಷಯದಲ್ಲಿ ನಿನಗೆ ಹೇಳಿದ್ದಾರೋ ಎಂದು ಕೇಳಲು 35ಪಿಲಾತನು - ನಾನೇನು ಯೆಹೂದ್ಯನೇ? ನಿನ್ನ ಸ್ವಂತ ಜನವೂ ಮಹಾಯಾಜಕರೂ ನಿನ್ನನ್ನು ನನಗೆ ಒಪ್ಪಿಸಿದ್ದಾರೆ; ನೀನು ಏನು ಮಾಡಿದ್ದೀ ಎಂದು ಕೇಳಿದ್ದಕ್ಕೆ 36ಯೇಸು - ನನ್ನ ರಾಜ್ಯವು ಈ ಲೋಕದ್ದಲ್ಲ; ನನ್ನ ರಾಜ್ಯವು ಈ ಲೋಕದ್ದಾಗಿದ್ದರೆ ನಾನು ಯೆಹೂದ್ಯರ ಕೈಯಲ್ಲಿ ಬೀಳದಂತೆ ನನ್ನ ಪರಿವಾರದವರು ಕಾದಾಡುತ್ತಿದ್ದರು; ಆದರೆ ನನ್ನ ರಾಜ್ಯವು ಇಲ್ಲಿಯದಲ್ಲವೆಂದು ಉತ್ತರಕೊಟ್ಟನು. 37ಅದಕ್ಕೆ ಪಿಲಾತನು - ಹಾಗಾದರೆ ನೀನು ಅರಸನು ಹೌದಲ್ಲವೇ ಅಂದನು. ಯೇಸು ಅವನಿಗೆ - ನನ್ನನ್ನು ಅರಸನೆಂದು ನೀನೇ ಹೇಳಿದ್ದೀ. ನಾನು ಸತ್ಯದ ವಿಷಯದಲ್ಲಿ ಸಾಕ್ಷಿ ಹೇಳುವದಕ್ಕೋಸ್ಕರ ಹುಟ್ಟಿದವನು, ಅದಕ್ಕೋಸ್ಕರವೇ ಈ ಲೋಕಕ್ಕೆ ಬಂದಿದ್ದೇನೆ. ಸತ್ಯಪರರೆಲ್ಲರು ನನ್ನ ಮಾತಿಗೆ ಕಿವಿಕೊಡುತ್ತಾರೆ ಎಂದು ಉತ್ತರಕೊಟ್ಟನು. 38ಪಿಲಾತನು - ಸತ್ಯವಂದರೇನು? ಅಂದನು.
ಇದನ್ನು ಹೇಳಿ ಪಿಲಾತನು ತಿರಿಗಿ ಯೆಹೂದ್ಯರ ಬಳಿಗೆ ಹೊರಕ್ಕೆ ಬಂದು - ನನಗೆ ಅವನಲ್ಲಿ ಯಾವ ಅಪರಾಧವೂ ಕಾಣಿಸುವದಿಲ್ಲ. 39ಆದರೆ ಪಸ್ಕಹಬ್ಬದಲ್ಲಿ ನಾನು ಒಬ್ಬನನ್ನು ನಿಮಗೆ ಬಿಟ್ಟುಕೊಡುವ ಪದ್ಧತಿ ಉಂಟಷ್ಟೆ; ನಾನು ಯೆಹೂದ್ಯರ ಅರಸನನ್ನು ಬಿಟ್ಟುಕೊಡುವದು ನಿಮಗೆ ಇಷ್ಟವೋ ಎಂದು ಅವರನ್ನು ಕೇಳಿದನು. 40ಅದಕ್ಕೆ ಅವರು - ಇವನನ್ನು ಬೇಡ, ಬರಬ್ಬನನ್ನು ಬಿಟ್ಟುಕೊಡಬೇಕು ಎಂದು ತಿರಿಗಿ ಕೂಗಿ ಹೇಳಿದರು. ಈ ಬರಬ್ಬನು ಕಳ್ಳನಾಗಿದ್ದನು.

Highlight

Share

Copy

None

Want to have your highlights saved across all your devices? Sign up or sign in

YouVersion uses cookies to personalize your experience. By using our website, you accept our use of cookies as described in our Privacy Policy